ADVERTISEMENT

ಬೆಂಗಳೂರು ವಿವಿ: ‘ಸ್ಕ್ಯಾನಿಂಗ್‌: ಹೊರಗುತ್ತಿಗೆ ನೀಡದಿರಲು ತೀರ್ಮಾನ ?’

ಉತ್ತರ ಪತ್ರಿಕೆಗಳ ಅಂಕ ತಿದ್ದಿದ ಹಗರಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:14 IST
Last Updated 7 ಜನವರಿ 2021, 19:14 IST
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ   

ಬೆಂಗಳೂರು: ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌ ಮಾಡುವ ಗುತ್ತಿಗೆ ಪಡೆದಿದ್ದ ಕಂಪನಿಯಿಂದಲೇ ಅಕ್ರಮ ನಡೆದಿರುವ ಕಾರಣ, ಇನ್ನು ಮುಂದೆ ಪರೀಕ್ಷೆಗಳಿಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿಯನ್ನು ಹೊರಗುತ್ತಿಗೆಗೆ ನೀಡದಿರುವ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯ ಚಿಂತನೆ ನಡೆಸುತ್ತಿದೆ.

2020ರ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ 804 ಉತ್ತರ ಪತ್ರಿಕೆಗಳ ಅಂಕಗಳನ್ನು ತಿದ್ದಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಮಾಡಿ, ಅಂಕಗಳ ಪಟ್ಟಿ ಸಿದ್ಧಪಡಿಸುವ ಗುತ್ತಿಗೆ ಪಡೆದಿದ್ದ ಟಿಆರ್‌ಎಸ್‌ ಕಂಪನಿ ಮತ್ತು ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಭಾಗದ ಕೆಲವು ಸಿಬ್ಬಂದಿ ಈ ಅಕ್ರಮ ನಡೆಸಿದ್ದರ ಬಗ್ಗೆ ದೂರು ಕೂಡ ದಾಖಲಾಗಿದೆ.

‘ಉತ್ತರ ಪತ್ರಿಕೆ ಸ್ಕ್ಯಾನಿಂಗ್‌ ಮಾಡುವಂತಹ ಮಹತ್ತರ ಜವಾಬ್ದಾರಿಯನ್ನು ಹೊರಗಿನ ಕಂಪನಿಗಳಿಗೆ ನೀಡುವುದು ಸರಿ ಕಾಣಿಸುವುದಿಲ್ಲ. ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಇಂತಹ ಅಕ್ರಮಗಳು ನಡೆಯುವ ಸಾಧ್ಯತೆ ಇರುತ್ತದೆ. ಯಾವುದೇ ವಿಶ್ವವಿದ್ಯಾಲಯವು ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯನ್ನು ನಡೆಸಲು ಸಮರ್ಥವಾಗಿಯೇ ಇರುತ್ತದೆ. ಇನ್ನು ಮುಂದೆ ಯಾವುದೇ ಕಂಪನಿಗೆ ಹೊರಗುತ್ತಿಗೆ ನೀಡಬಾರದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿಯೂ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌ ಮಾಡುವ ಗುತ್ತಿಗೆಯನ್ನು ಬೇರೆ ಕಂಪನಿಗಳಿಗೆ ನೀಡಲಾಗಿದೆ. ಕೆಲವು ಕಂಪನಿಗಳು ಹತ್ತಾರು ವರ್ಷಗಳಿಂದ ಇದೇ ಕಾರ್ಯ ಮಾಡುತ್ತಿವೆ. ಮೌಲ್ಯಮಾಪನ ಪ್ರಕ್ರಿಯೆಯ ಸಂಪೂರ್ಣ ಅರಿವು ಈ ಕಂಪನಿಗಳಿಗೆ ಇದೆ. ಲಕ್ಷಾಂತರ ಉತ್ತರ ಪತ್ರಿಕೆಗಳು ಇರುವುದರಿಂದ ಯಾರೂ ಮರುಪರಿಶೀಲನೆ ಮಾಡಲಾರರು ಎಂಬ ಧೈರ್ಯದಲ್ಲಿ ಕೆಲವು ಕಂಪನಿಗಳು ಹೀಗೆ ಅಂಕ ತಿದ್ದುವ ಮೂಲಕ ದುಡ್ಡು ಮಾಡುವ ಕೆಲಸದಲ್ಲಿ ನಿರತವಾಗಿವೆ. ಮೌಲ್ಯಮಾಪನದ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡುವುದನ್ನೇ ಬಿಡಬೇಕು’ ಎಂದರು.

‘ಪರೀಕ್ಷಾ ವ್ಯವಸ್ಥೆಯಲ್ಲಿ ಮಾರ್ಪಾಡು ತಂದು ಸಂಪೂರ್ಣ ಪ್ರಕ್ರಿಯೆಯನ್ನು ವಿಶ್ವವಿದ್ಯಾಲಯದೊಳಗೇ ನಡೆಸಲು ಸೂಕ್ತ ವ್ಯವಸ್ಥೆ ರೂಪಿಸುವ ಚಿಂತನೆಯೂ ಇದೆ’ ಎಂದು ತಿಳಿಸಿದರು.

ಎಬಿವಿಪಿ ಪ್ರತಿಭಟನೆ ಇಂದು:

ಉತ್ತರಪತ್ರಿಕೆ ತಿದ್ದಿದ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜ್ಞಾನಭಾರತಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಿದೆ.

‘ವಿಶ್ವವಿದ್ಯಾಲಯದಲ್ಲಿ ಇಂತಹ ಅಕ್ರಮಗಳು ನಡೆಯುತ್ತಿರುವುದು ಇದೇ ಮೊದಲ ಸಲವೇನಲ್ಲ. ಇಂತಹ ಹಲವು ಹಗರಣಗಳಿಗೆ ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ. ಉತ್ತರ ಪತ್ರಿಕೆ ತಿದ್ದಿದ ಈ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆಗೆ ಆದೇಶಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.