
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ರಸ್ತೆ ಕತ್ತರಿಸಲು ‘ಮಾರ್ಕ್ಸ್’ ತಂತ್ರಾಂಶದಲ್ಲಿ ಅನುಮತಿ ಪಡೆಯಬೇಕು. ಯಾವುದೇ ಇಲಾಖೆ ಸಮ್ಮತಿ ಪಡೆಯದೆ ರಸ್ತೆ ಕತ್ತರಿಸಿದರೆ ದಂಡ ವಿಧಿಸುವ ಜೊತೆಗೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಬೆಸ್ಕಾಂ, ಕೆಪಿಟಿಸಿಎಲ್, ಜಲಮಂಡಳಿ ಹಾಗೂ ಗೇಲ್ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಶುಕ್ರವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ರಸ್ತೆ ಕತ್ತರಿಸುವ ಅಗತ್ಯವಿದ್ದಲ್ಲಿ ‘ಮಾರ್ಕ್ಸ್’ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಆಯಾ ನಗರ ಪಾಲಿಕೆಗಳು ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಲಿವೆ. ಅನುಮತಿ ದೊರಕಿದ ನಂತರ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು ಎಂದು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ರಸ್ತೆ ಕತ್ತರಿಸುವ ಕುರಿತ ಪೂರ್ವಭಾವಿ ಪಟ್ಟಿಯನ್ನು ಎಲ್ಲ ಇಲಾಖೆಗಳು ಸಿದ್ಧಪಡಿಸಿ ಸಲ್ಲಿಸಬೇಕು. ಜೊತೆಗೆ, ಗೂಗಲ್ ಮ್ಯಾಪ್‌ನಲ್ಲಿ ಯಾವ ರಸ್ತೆಯಲ್ಲಿ ಎಷ್ಟು ಉದ್ದದ ರಸ್ತೆ ಕತ್ತರಿಸಲಾಗುತ್ತಿದೆ ಎಂಬುದನ್ನು ಗುರುತಿಸಿ, ಆ ಮಾಹಿತಿಯನ್ನು ಎಲ್ಲಾ ನಗರ ಪಾಲಿಕೆಗಳಿಗೆ ಒದಗಿಸಬೇಕು ಎಂದರು.
ಕಾಲಮಿತಿ: ನಗರದಲ್ಲಿ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಬೇಕು. ಈಗಾಗಲೇ ಎನ್–ಕ್ಯಾಪ್ ಅನುದಾನದಡಿ ಹಲವೆಡೆ ಕಾಮಗಾರಿ ಆರಂಭಗೊಂಡಿದೆ. ಬಿಎಂಟಿಸಿಯಿಂದ ಫೀಡರ್ ಬಸ್ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ಸ್ಕೈ ವಾಕ್ ನಿರ್ಮಾಣ, ಬಸ್ ನಿಲ್ದಾಣಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮಹೇಶ್ವರ್ ರಾವ್ ಸೂಚಿಸಿದರು.
ಜೆಟ್ಟಿಂಗ್ ಯಂತ್ರ ಖರೀದಿ: ನಗರದ ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿ ನಿರ್ವಹಿಸುವ ಉದ್ದೇಶದಿಂದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ವತಿಯಿಂದ ಪ್ರತಿಯೊಂದು ನಗರ ಪಾಲಿಕೆಗೆ ಒಂದರಂತೆ ಐದು ವಾಟರ್ ಜೆಟ್ಟಿಂಗ್ ಯಂತ್ರಗಳನ್ನು ಖರೀದಿಸಬೇಕು ಎಂದು ಹೇಳಿದರು.
ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಕೆಲವು ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿ ಮತ್ತು ಸಂಚಾರ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಬೇಕಿದೆ. ಈ ಸಂಬಂಧ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿ, ಆ ಸ್ಥಳಗಳಿಗೆ ಜಿಬಿಎ, ಸಂಚಾರ ಪೊಲೀಸ್ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.
ಮಹೇಶ್ವರ್ ರಾವ್ ಸೂಚನೆಗಳು
* ನಗರದಲ್ಲಿನ 69 ಮೆಟ್ರೊ ನಿಲ್ದಾಣಗಳ ಸುತ್ತಮುತ್ತ ಅನಧಿಕೃತ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಬೇಕು
* ರಸ್ತೆ ಸುರಕ್ಷತಾ ಭಾಗವಾಗಿ ಆಯಾ ನಗರ ಪಾಲಿಕೆಗಳು ಡಲ್ಟ್ ಹಾಗೂ ಮೆಟ್ರೊ ನಿಗಮ ಕ್ರಾಸಿಂಗ್ ಪೇಂಟಿಂಗ್ ಸೇರಿದಂತೆ ಅಗತ್ಯ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು
* ಬಸ್ ತಂಗುದಾಣಗಳ ಸ್ಥಳಾಂತರ ಕಾರ್ಯವನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು
* ಪಾದಚಾರಿ ಮಾರ್ಗಗಳಲ್ಲಿ ವಿದ್ಯುತ್ ಕಂಬಗಳು ಟ್ರಾನ್ಸ್‌ಫಾರ್ಮರ್ ಸ್ಥಳಾಂತರ ಅಪಾಯಕರ ಸ್ಥಿತಿಯಲ್ಲಿರುವ ತಂತಿಗಳನ್ನು ಗುರುತಿಸಿ ಸಮಸ್ಯೆ ಪರಿಹರಿಸಬೇಕು
ಸ್ವಚ್ಛ ಭಾರತ ಮಿಷನ್ ಶ್ಲಾಘನೆ
2026ರ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಉತ್ಪತ್ತಿಯಾದ ಸುಮಾರು ಒಂಬತ್ತು ಟನ್ ತ್ಯಾಜ್ಯವನ್ನು ಐದು ಗಂಟೆಯಲ್ಲಿ ತೆರವುಗೊಳಿಸಿರುವುದಕ್ಕೆ ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಮಿಷನ್’ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಎಕ್ಸ್’ನಲ್ಲಿ ಮಾಹಿತಿ ಹಾಗೂ ಚಿತ್ರಗಳನ್ನು ಹಂಚಿಕೊಂಡು ಬೆಂಗಳೂರು ಕೇಂದ್ರ ನಗರ ಪಾಲಿಕೆಯನ್ನು ಶ್ಲಾಘಿಸಲಾಗಿದೆ ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.