ADVERTISEMENT

ಮತದಾರರ ಹೆಸರು ಡಿಲೀಟ್: ತನಿಖೆಗೆ ಆದೇಶ

ಸಾಮೂಹಿಕವಾಗಿ ಹೆಸರು ಕೈಬಿಟ್ಟಿಲ್ಲ: ಸಂಜೀವ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 19:58 IST
Last Updated 21 ಏಪ್ರಿಲ್ 2019, 19:58 IST
ಸಂಜೀವ್‌ ಕುಮಾರ್
ಸಂಜೀವ್‌ ಕುಮಾರ್   

ಬೆಂಗಳೂರು: ‘ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸಾಮೂಹಿಕವಾಗಿ ಹೆಸರು ಕೈಬಿಡಲಾಗಿದೆ ಎಂಬುದು ಸುಳ್ಳು. ಆದರೆ, ಕೆಲವು ನಿರ್ದಿಷ್ಟ ದೂರಗಳು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಸ್ಪಷ್ಟಪಡಿಸಿದರು.

‘ಈ ಸಂಬಂಧ ಆಯೋಗಕ್ಕೆ ಎರಡು ರೀತಿಯ ದೂರುಗಳು ಬಂದಿವೆ. ರಾಜಕೀಯ ಪಕ್ಷಗಳು ಮತ್ತು ವೈಯಕ್ತಿಕ ದೂರುಗಳು ಬಂದಿವೆ. ಪಕ್ಷಗಳು ಸಂದೇಹ ವ್ಯಕ್ತಪಡಿಸಿದ ರೀತಿಯಲ್ಲಿ ಸಾಮೂಹಿಕವಾಗಿ ಹೆಸರು ಡಿಲಿಟ್ ಆಗಿಲ್ಲ’ ಎಂದರು.

‘2018ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದೆವು. ಈ ಬಾರಿ ಹೆಸರು ಪಟ್ಟಿಯಲ್ಲಿ ಇಲ್ಲ’ ಎಂಬ ವೈಯಕ್ತಿಕ ದೂರುಗಳು ಬಂದಿವೆ. ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಹೋದಾಗ, ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎಂದು ಸ್ಥಳೀಯರು ನೀಡಿರುವ ಹೇಳಿಕೆಗಳನ್ನು ಆಧರಿಸಿ ಕೆಲವು ಹೆಸರನ್ನು ಬಿಡಲಾಗಿದೆ. ಆದರೂ ಎಲ್ಲಾ ಪ್ರಕರಣಗಳ ತನಿಖೆಗೆ ಆದೇಶಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಅಭ್ಯರ್ಥಿಗಳಿಗೆ ಆಗಾಗ ಕರಡು ಮತದಾರರ ಪಟ್ಟಿಯನ್ನು ಆಯೋಗದಿಂದ ನೀಡಿದ್ದೇವೆ. ಕೊನೆಯಲ್ಲಿ ಅಂತಿಮ ಮತದಾರರ ಪಟ್ಟಿ ನೀಡಲಾಗಿದೆ. ಅದನ್ನು ಆಧರಿಸಿಯೇ ಚುನಾವಣೆ ನಡೆದಿದೆ. ಆದರೆ, ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆ ಹೊರಗೆ ಕುಳಿತು ಚೀಟಿ ಬರೆದು ಕೊಡುವಾಗ ಹಳೇ ಮತದಾರರ ಪಟ್ಟಿ ನೋಡಿ, ಹೆಸರಿಲ್ಲ ಎಂದು ವಾಪಸ್ ಕಳುಹಿಸಿರುವ ಉದಾಹರಣೆಗಳೂ ಇವೆ. ಈ ರೀತಿಯ ಪ್ರಕರಣಗಳು ಗಮನಕ್ಕೆ ಬಂದಾಗ ಹಲವರನ್ನು ಕರೆತಂದು ಅಧಿಕಾರಿಗಳು ಮತದಾನ ಮಾಡಿಸಿದ್ದಾರೆ’ ಎಂದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳನ್ನು ಸಾಮೂಹಿಕವಾಗಿ ಡಿಲಿಟ್ ಮಾಡಲಾಗಿದೆ. ಇದು ಬಿಬಿಎಂಪಿ ಸಂಚು’ ಎಂದು ಆರೋಪಿಸಿ ಬಿಜೆಪಿ ಆಯೋಗಕ್ಕೆ ದೂರು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.