ADVERTISEMENT

‘ಬದುಕಿನ ಚಿತ್ರಣ ಭಿನ್ನವಾಗಿ ಕಟ್ಟಿಕೊಟ್ಟ ಮಾಸ್ತಿ’

ಮಾಸ್ತಿ ಕಾದಂಬರಿ, ಕಥಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಾಹಿತಿ ದೊಡ್ಡರಂಗೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 19:40 IST
Last Updated 15 ಅಕ್ಟೋಬರ್ 2022, 19:40 IST
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹಿರೇಮಠ (ಲೇಖಕ), ರಮಾಕಾಂತ್‌ ಜೋಷಿ (ಪ್ರಕಾಶಕ), ಡಾ.ಗಜಾನನ ಶರ್ಮ (ಲೇಖಕ), ಪ್ರಕಾಶ್ ಕಂಬತ್ತಳ್ಳಿ (ಪ್ರಕಾಶಕ), ದಾದಾಪೀರ್‌ ಜೈಮನ್‌ (ಬರಹಗಾರ) ಹಾಗೂ ಮುದಿರಾಜು (ಪ್ರಕಾಶಕ) ಅವರಿಗೆ ಮಾಸ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು. ಎಸ್.ಆರ್. ವಿಜಯಶಂಕರ, ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌, ದೊಡ್ಡರಂಗೇಗೌಡ, ಬಿ.ಆರ್‌.ಲಕ್ಷ್ಮಣ ರಾವ್‌ ಹಾಗೂ ಟ್ರಸ್ಟ್ ಸದಸ್ಯರು ಇದ್ದಾರೆ     – ಪ್ರಜಾವಾಣಿ ಚಿತ್ರ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹಿರೇಮಠ (ಲೇಖಕ), ರಮಾಕಾಂತ್‌ ಜೋಷಿ (ಪ್ರಕಾಶಕ), ಡಾ.ಗಜಾನನ ಶರ್ಮ (ಲೇಖಕ), ಪ್ರಕಾಶ್ ಕಂಬತ್ತಳ್ಳಿ (ಪ್ರಕಾಶಕ), ದಾದಾಪೀರ್‌ ಜೈಮನ್‌ (ಬರಹಗಾರ) ಹಾಗೂ ಮುದಿರಾಜು (ಪ್ರಕಾಶಕ) ಅವರಿಗೆ ಮಾಸ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು. ಎಸ್.ಆರ್. ವಿಜಯಶಂಕರ, ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌, ದೊಡ್ಡರಂಗೇಗೌಡ, ಬಿ.ಆರ್‌.ಲಕ್ಷ್ಮಣ ರಾವ್‌ ಹಾಗೂ ಟ್ರಸ್ಟ್ ಸದಸ್ಯರು ಇದ್ದಾರೆ     – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಹೆಸರೇ ಚಿರಂತನವಾಗಿದ್ದು, ಬದುಕಿನ ಚಿತ್ರಣವನ್ನು ಬರಹದ ಮೂಲಕ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಕವಿ ದೊಡ್ಡರಂಗೇಗೌಡ ಹೇಳಿದರು.

ಮಾಸ್ತಿ ಅವರ 131ನೇ ಜನ್ಮ ದಿನದ ಅಂಗವಾಗಿ ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌ ನೀಡುವ ಮಾಸ್ತಿ ಕಾದಂಬರಿ ಪುರಸ್ಕಾರವನ್ನು ಲೇಖಕ ಮಲ್ಲಿಕಾರ್ಜುನ ಹಿರೇಮಠ (ಹಾವಳಿ), ಡಾ.ಗಜಾನನ ಶರ್ಮ (ಚೆನ್ನಭೈರಾದೇವಿ) ಹಾಗೂ ಕಥಾ ಪುರಸ್ಕಾರವನ್ನು ದಾದಾಪೀರ್‌ ಜೈಮನ್‌ (ನೀಲಕುರಿಂಜಿ) ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

‘ಮಾಸ್ತಿ ಅವರು ಬರವಣಿಗೆಯಲ್ಲಿ ಭಾರತೀಯ ಪರಂಪರೆಯ ಮೌಲಿಕತೆ ಎತ್ತಿ ಹಿಡಿದಿದ್ದಾರೆ. ಪರಂಪರೆಯ ಜೊತೆಗೆ ಕೃತಿಗಳ ಮೌಲಿಕತೆ ಎತ್ತರಕ್ಕೆ ಕೊಂಡೊಯ್ದರು’ ಎಂದು ಬಣ್ಣಿಸಿದರು.

ADVERTISEMENT

‘ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯ ಧ್ರುವಬಿಂದು ಮಾಸ್ತಿ. ಅವರನ್ನು ಟಾಲ್‌ಸ್ಟಾಯ್‌ಗೆ ಹೋಲಿಕೆ ಮಾಡಿದ್ದೆ’ ಎಂದು ಹೇಳಿದರು.

ವಿಮರ್ಶಕ ಎಸ್‌.ಆರ್‌.ವಿಜಯಶಂಕರ ಮಾತನಾಡಿ, ‘ಮಾಸ್ತಿ ಟ್ರಸ್ಟ್‌ ಪೂರ್ವಗ್ರಹವಿಲ್ಲದೇ ವಸ್ತುನಿಷ್ಠವಾಗಿ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಿದೆ. ಪುರಸ್ಕಾರಕ್ಕೆ ಬಂದ ಕಥೆಗಳನ್ನು ಓದಿದರೆ ಕಥಾ ಪ್ರಪಂಚದ ಕುರಿತು ಭರವಸೆ ಮೂಡುತ್ತಿದೆ’ ಎಂದರು.

‘ಮಾಸ್ತಿ ಅವರ ಬರಹಗಳು ಓದಿದಾಗ ಮತ್ತೊಂದು ವಿಚಾರವನ್ನೇ ಧ್ವನಿಸುತ್ತವೆ. ಪುರಸ್ಕಾರಕ್ಕೆ ಭಾಜನವಾದ ದಾದಾಪೀರ್ ಜೈಮನ್‌ ಅವರ ಕೃತಿಯಲ್ಲಿ 10 ಸಣ್ಣ ಕಥೆಗಳಿವೆ. ಬದುಕಿನ ಭಾಗವನ್ನು ಒಂದು ಚೌಕಟ್ಟಿನಲ್ಲಿ ಅವರು ಸೆರೆ ಹಿಡಿದಿದ್ದಾರೆ’ ಎಂದು ವಿಶ್ಲೇಷಿಸಿದರು.

ಮಾಸ್ತಿ ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಮಾತನಾಡಿ, ‘ಮಾಸ್ತಿ ಒಬ್ಬರೇ ಬರೆಯದೆ ಸಮಕಾಲೀನರಿಂದಲೂ ಬರೆಸಿದರು. ಸಾಹಿತ್ಯ ರಚನೆಯಲ್ಲಿ ಯಶಸ್ಸು ಸಂಪಾದಿಸಿದರು. ಕನ್ನಡ, ಇಂಗ್ಲಿಷ್‌ನಲ್ಲಿ 126 ಕೃತಿ ರಚಿಸಿದ್ದಾರೆ’ ಎಂದರು.

‘ಕಾದಂಬರಿ ಪುರಸ್ಕಾರಕ್ಕೆ 25, ಕಥಾ ಪುರಸ್ಕಾರಕ್ಕೆ 40 ಕೃತಿಗಳು ಬಂದಿದ್ದವು. ಎಲ್ಲ ಕೃತಿಗಳೂ ಗುಣಮಟ್ಟದಿಂದ ಕೂಡಿದ್ದು, ಬರವಣಿಗೆಯ ತುಡಿತ ಕಾಣಿಸಿತು’ ಎಂದು ಹೇಳಿದರು.

ಮಲ್ಲಿಕಾರ್ಜುನ ಹಿರೇಮಠ ಅವರು, ‘ಹಾವಳಿ ಕೃತಿಯನ್ನು ವಿಜೃಂಭಣೆ ಅಥವಾ ಹೊಗಳಿಕೆಗೆ ಬರೆದಿಲ್ಲ. ವಸ್ತುನಿಷ್ಠವಾಗಿ ಬರೆದಿರುವೆ. ಧಾರ್ಮಿಕ ಮೂಲಭೂತವಾದ ಹಳ್ಳಿ ಪ್ರವೇಶಿಸಿದರೆ ಕೇಡು ಹೇಗೆ ಬರುತ್ತದೆ ಎಂಬುದನ್ನು ಕಾದಂಬರಿ ಕಟ್ಟಿಕೊಡುತ್ತದೆ’ ಎಂದರು.

ಗಜಾನನ ಶರ್ಮ ಮಾತನಾಡಿ, ‘ಮಾಸ್ತಿ ಪ್ರಶಸ್ತಿ ಬಹಳ ದೊಡ್ಡದು’ ಎಂದರು. ಪತ್ರಕರ್ತ ರಘುನಾಥ ಚ.ಹ. ಕಾದಂಬರಿ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.