ಬೆಂಗಳೂರು: ಪೊಲೀಸ್ ಮಹಾ ನಿರ್ದೇಶಕರಾಗಿರುವ ಡಾ.ಎಂ.ಎ. ಸಲೀಂ ಅವರು ಸಹೋದ್ಯೋಗಿಗಳಿಗೆ ಪತ್ರ ಬರೆದು ಕೆಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಅಪರಾಧಗಳ ನಿಯಂತ್ರಣ ಹಾಗೂ ಹೆಚ್ಚು ಸುರಕ್ಷಿತ ವಾತಾವರಣ ನಿರ್ಮಿಸಲು ರಾಜ್ಯ ಪೊಲೀಸ್ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕತೆಯಲ್ಲಿ ಎಂದೂ ರಾಜಿಯಾಗಕೂಡದು. ಪ್ರಾಮಾಣಿಕತೆಗೆ ಆದ್ಯತೆ ನೀಡುವಿರಿ ಎಂಬ ವಿಶ್ವಾಸವಿದೆ. ಪಾರದರ್ಶಕತೆಗೆ ಅತಿ ಹೆಚ್ಚು ಒತ್ತು ನೀಡುವುದರಿಂದ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆ ಮೂಡಲಿದೆ. ದುರ್ಬಲ ವರ್ಗ, ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ. ಇಂತಹ ಪ್ರಾಮಾಣಿಕತೆಯ ಸಿದ್ಧಾಂತಗಳು ನಮ್ಮ ನೈತಿಕತೆ ಮತ್ತು ಆತ್ಮತೃಪ್ತಿ ದ್ವಿಗುಣಗೊಳಿಸುತ್ತವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಮಾದಕ ವಸ್ತುಗಳ ವಿರುದ್ಧದ ಸಮರ ನಿರಂತರವಾಗಿರಬೇಕು. ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಸಾಗಣೆ ಹಾಗೂ ಮಾರಾಟಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು’ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.
‘ಸಂಘಟಿತ ಅಪರಾಧಗಳನ್ನು ತಡೆಯಲು ಚಾಲ್ತಿಯಲ್ಲಿ ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ರಸ್ತೆಗಳಲ್ಲಿ ಉತ್ತಮ ಸಂಚಾರ ನಿರ್ವಹಣೆ ಜಾರಿ ಮಾಡುವುದು ಹಾಗೂ ರಸ್ತೆ ಅಪಘಾತಗಳ ಪರಿಣಾಮಕಾರಿ ನಿಯಂತ್ರಣದಿಂದ ಅಮಾಯಕರ ಪ್ರಾಣವನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಅರಿಯಬೇಕು’ ಎಂದಿದ್ದಾರೆ.
‘ಉತ್ತಮ ಮಾನವ ಸಂಪನ್ಮೂಲವೇ ಪೊಲೀಸ್ ಇಲಾಖೆಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ನಿಯಮಿತ ವ್ಯಾಯಾಮ ಮಾಡಬೇಕು. ಕೆಲಸದ ಒತ್ತಡ ನಿವಾರಣೆ ಮಾಡಿಕೊಳ್ಳಬೇಕು. ಸಿಬ್ಬಂದಿಗೆ ವಿನಾಕಾರಣ ರಜೆ ನಿರಾಕರಿಸಬಾರದು. ಉತ್ತಮ ಸೇವೆಯನ್ನು ಗುರುತಿಸಿ ಪುರಸ್ಕರಿಸಬೇಕು. ಅದರಿಂದ ಪ್ರೇರೇಪಣೆಗೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.