ADVERTISEMENT

ಬಿಬಿಎಂಪಿ ಬಜೆಟ್‌ಗೆ ತಡೆ: ಕೈಬಿಡಲು ಮೇಯರ್‌ ಮನವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 20:15 IST
Last Updated 5 ಆಗಸ್ಟ್ 2019, 20:15 IST
   

ಬೆಂಗಳೂರು: ಬಿಬಿಎಂಪಿ ಬಜೆಟ್‌ಗೆ ತಡೆ ನೀಡಿರುವುದರಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದ್ದು, ತಕ್ಷಣವೇ ಅನುಮತಿ ನೀಡಬೇಕು ಎಂದು ಮೇಯರ್‌ ಗಂಗಾಂಬಿಕೆ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಅವರು, ‘ಬಜೆಟ್‌ಗೆ ತಡೆ ನೀಡಿರುವುದರಿಂದ ರಸ್ತೆಗಳ ವಿಸ್ತರಣೆ, ವೈಟ್‌ ಟಾಪಿಂಗ್‌, ಫ್ಲೈಓವರ್‌ಗಳ ನಿರ್ಮಾಣ, ರಾಜಕಾಲುವೆಗಳ ಹೂಳೆತ್ತುವುದು ಮುಂತಾದ ಕಾರ್ಯಗಳು ನಿಂತು ಹೋಗಲಿವೆ’ ಎಂದು ಹೇಳಿದರು.

‘ಇವೆಲ್ಲದರ ಪರಿಣಾಮ ಬಿಬಿಎಂಪಿ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರಿಗೆ ವೇತನ ವಿತರಿಸುವುದು ಕಷ್ಟವಾಗಿದೆ. ಕನಿಷ್ಠ ಪಕ್ಷ ಜಾಬ್‌ ಕೋಡ್‌ ತಡೆ ಹಿಡಿಯದಂತೆ ಸಂಬಂಧಿಸಿದ ಅಧಿಕಾರಿಗಳೂ ಸೂಚನೆ ನೀಡಬೇಕು’ ಎಂದೂ ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ನಾನು ಯಾವುದೇ ದುರುದ್ದೇಶದಿಂದ ಬಜೆಟ್‌ ಅನ್ನು ತಡೆ ಹಿಡಿದಿಲ್ಲ. ವೈಟ್‌ ಟಾಪಿಂಗ್‌ ಮತ್ತು ಇತರ ಕಾಮಗಾರಿ ಹೆಸರಿನಲ್ಲಿ ದುರುಪಯೋಗ ಆಗುತ್ತಿದೆ. ನೂರಾರು ಕೋಟಿ ಅಪವ್ಯಯವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಅಧಿಕಾರಿಗಳ ಜತೆ ಚರ್ಚೆ ನಡೆಸಿ ಬಜೆಟ್‌ಗೆ ಒಪ್ಪಿಗೆ ನೀಡುತ್ತೇನೆ’ ಎಂದರು.

‘ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳು ನಿಮ್ಮ ದಾರಿ ತಪ್ಪಿಸುವ ಮೂಲಕ, ಈ ಸಂಬಂಧ ಪ್ರಚಾರವನ್ನೂ ನಡೆಸುತ್ತಿದ್ದಾರೆ. ರಸ್ತೆಗಳ ಗುಂಡಿ ಮುಚ್ಚುವುದು ಮತ್ತು ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಗಳಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದೆ’ ಎಂದು ಯಡಿಯೂರಪ್ಪ ತಿಳಿಸಿದರು.

ಭ್ರಷ್ಟಾಚಾರ ಕಣ್ಣ ಮುಂದೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.