ADVERTISEMENT

ಬಿಡಿಎ ಆಯುಕ್ತರಾಗಿ ಎಂ.ಬಿ.ರಾಜೇಗೌಡ ನೇಮಕ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 21:35 IST
Last Updated 30 ಏಪ್ರಿಲ್ 2021, 21:35 IST

ಬೆಂಗಳೂರು: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ರಾಜೇಗೌಡ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರನ್ನಾಗಿ ನೇಮಿಸಲಾಗಿದೆ.

ಈವರೆಗೆ ಆಯುಕ್ತರಾಗಿದ್ದ ಎಚ್‌.ಆರ್‌.ಮಹದೇವ್ ಅವರು ಶುಕ್ರವಾರ ಸೇವೆಯಿಂದ ನಿವೃತ್ತಿ ಹೊಂದಿದರು. ಅದರಿಂದ ತೆರವಾದ ಸ್ಥಾನಕ್ಕೆ ರಾಜೇಗೌಡ ನೇಮಕಗೊಂಡಿದ್ದು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಮುಂದುವರಿಯಲಿದ್ದಾರೆ.

ಮಹದೇವ್ ಅವರು ಈ ಹುದ್ದೆಯಲ್ಲಿ ಇನ್ನೂ ಒಂದು ವರ್ಷ ಮುಂದುವರಿಯಲು ಪ್ರಯತ್ನ ನಡೆಸಿದ್ದರು. ತಮ್ಮ ಜನ್ಮ ದಿನಾಂಕ ದಾಖಲೆಗಳಲ್ಲಿ ತಪ್ಪಾಗಿದೆ. ಅದನ್ನು ವಂಶವೃಕ್ಷದ ಪ್ರಕಾರ ಸರಿಪಡಿಸಿ ಸೇವಾವಧಿಯನ್ನು ವಿಸ್ತರಣೆ ಮಾಡುವಂತೆ ಮಹದೇವ್ ಅವರು ಕೇಂದ್ರ ಆಡಳಿತ ನ್ಯಾಯ ಮಂಡಳಿಗೆ (ಸಿಎಟಿ) ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಅರ್ಜಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ADVERTISEMENT

ಇದನ್ನು ಮುಂದಿಟ್ಟುಕೊಂಡು ಮಹದೇವ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಜನ್ಮ ದಿನಾಂಕದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿ ಸಹಿಯನ್ನೂ ಹಾಕಿದ್ದರು. ಆದರೆ, ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಈ ಪ್ರಸ್ತಾವನೆಯನ್ನು ತಳ್ಳಿಹಾಕಿತು.

ರಾಜ್ಯ ಸರ್ಕಾರ ತಮ್ಮ ಮನವಿ ಪರಿಗಣಿಸದಿರುವ ಕಾರಣ ಮಹದೇವ್ ಅವರು ನೇರವಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ಸೇವಾವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಕಾರ್ಯದರ್ಶಿ ಅವರೂ ಮನವಿಯನ್ನು ತಳ್ಳಿಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.