ADVERTISEMENT

ಸರ್ವರಿಗೂ ಚಿಕಿತ್ಸೆ ದೊರೆಯಲಿ: ವೈದ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 2:43 IST
Last Updated 12 ಡಿಸೆಂಬರ್ 2019, 2:43 IST
ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ವಿವಿಧ ನೂತನ ಘಟಕಗಳಿಗೆ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಬಿಎಂಸಿಆರ್‌ಐ ಡೀನ್ ಡಾ. ಜಯಂತಿ, ಮೇಯರ್ ಎಂ.ಗೌತಮ್ ಕುಮಾರ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ ಉದಯ್ ಗರುಡಾಚಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಲಹರ್ ಸಿಂಗ್ ಸಿರೋಯಾ ಇದ್ದರು –ಪ್ರಜಾವಾಣಿ ಚಿತ್ರ
ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ವಿವಿಧ ನೂತನ ಘಟಕಗಳಿಗೆ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಬಿಎಂಸಿಆರ್‌ಐ ಡೀನ್ ಡಾ. ಜಯಂತಿ, ಮೇಯರ್ ಎಂ.ಗೌತಮ್ ಕುಮಾರ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ ಉದಯ್ ಗರುಡಾಚಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಲಹರ್ ಸಿಂಗ್ ಸಿರೋಯಾ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸರ್ಕಾರಿ ವೈದ್ಯಕೀಯ ಸಂಸ್ಥೆ ಹಾಗೂ ಆಸ್ಪತ್ರೆಗಳಿಗೆ ಬರುವ ಶೇ 50ರಷ್ಟು ರೋಗಿಗಳು ವೈದ್ಯರಿಂದ ಕಿರುಕುಳ,ಚಿಕಿತ್ಸೆಗಳಿಗೆ ಅಲೆದಾಟ ನಡೆಸಬೇಕು ಎಂದು ಆರೋಪಿಸುತ್ತಿ ದ್ದಾರೆ. ಈ ಪರಿಸ್ಥಿತಿ ಬದಲಾಗಲು ವೈದ್ಯರ ಸಹಕಾರ ಅಗತ್ಯವಾಗಿದ್ದು, ಚಿಕಿತ್ಸೆ ಸಿಗದೆ ಯಾವುದೇ ರೋಗಿ ಆಸ್ಪತ್ರೆಯಿಂದ ಹೊರ ಹೋಗಬಾರದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಸಾವಿರಹಾಸಿಗೆಗಳ ಸಾಮರ್ಥ್ಯದ ಒಳರೋಗಿ ಕಟ್ಟಡದ ಶಂಕುಸ್ಥಾಪನೆ ಹಾಗೂ ವಿವಿಧ ನೂತನ ಘಟಕಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕೆನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲಾಗುತ್ತಿದೆ. ‘ಆಯುಷ್ಮಾನ್ ಭಾರತ್’ ಯೋಜನೆಯಡಿ ಬಡ–ಮಧ್ಯಮ ವರ್ಗದವರಿಗೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಆದರೆ, ಸೌಲಭ್ಯಗಳು ಸಿಗದಿರುವ ಬಗ್ಗೆ ದೂರುಗಳು ಬರುತ್ತಿವೆ. ಕೇವಲ ಕಟ್ಟಡಗಳನ್ನು ನಿರ್ಮಿಸುವು ದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಹಾಗಾಗಿ ಆರೋಪಗಳಿಗೆ ಅವಕಾಶ ಕೊಡಬೇಡಿ’ ಎಂದು ಸಲಹೆ ನೀಡಿದರು.

ADVERTISEMENT

ಉಪ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ‘ರಾಜ್ಯದಲ್ಲಿ ನಾಲ್ಕು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅನುಮತಿ ದೊರೆತಿದ್ದು, ಬಿಎಂಸಿಆರ್‌ಐ ಸಹಯೋಗದಲ್ಲಿ ಕ್ರೀಡಾ ಔಷಧಗಳ ವಿಭಾಗವನ್ನೂ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು.ಕಾರವಾರ, ಮೈಸೂರು, ಕೊಡಗು, ತುಮಕೂರು ಹಾಗೂ ರಾಯಚೂರು ಜಿಲ್ಲಾಸ್ಪತ್ರೆಗಳಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಉನ್ನತೀಕರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿಕ್ಟೋರಿಯಾ ಸಮುಚ್ಚಯ ಆಸ್ಪತ್ರೆಗಳು ಒಂದು ವರ್ಷದಲ್ಲಿ ಎನ್‍ಎಬಿಎಚ್‍ನಿಂದ (ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಸಂಸ್ಥೆ) ಮಾನ್ಯತೆ ಪಡೆಯುವ ಮೂಲಕ ಮಾದರಿಯಾಗಬೇಕು’ ಎಂದು ಹೇಳಿದರು.

‘2021ಕ್ಕೆ ಸೇವೆ ಆರಂಭ’

‘ವಿಕ್ಟೋರಿಯಾ ಆಸ್ಪತ್ರೆಯು ರಾಜ್ಯದ ಅತ್ಯಂತ ಹಳೆಯ ಆಸ್ಪತ್ರೆ ಎಂಬ ಖ್ಯಾತಿ ಪಡೆದಿದ್ದು, ಇಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಘಟಕ, ಚರ್ಮ ಕಸಿ ಬ್ಯಾಂಕ್‌ ಸ್ಥಾಪಿಸಲಾಗಿದೆ. 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಾವಿರ ಹಾಸಿಗೆ‌ಗಳ ಸಾಮರ್ಥ್ಯದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ₹ 68.53 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ನೆಲ ಮಹಡಿ ಹಾಗೂ 11 ಮಹಡಿಗಳನ್ನು ಒಳಗೊಂಡಿರುತ್ತದೆ. 2021ರ ಜೂನ್‌ಗೆ ಕಾಮಗಾರಿ ಪೂರ್ಣಗೊಳಿಸಿ, ಸೇವೆ ಆರಂಭಿಸಬೇಕು’ ಎಂದು ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

ಎನ್‍ಪಿಎಸ್ ಜಾರಿಗೆ ಶುಶ್ರೂಷಕರ ಸಂಘ ಮನವಿ

‘ವಾಣಿವಿಲಾಸ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಗರ್ಭಿಣಿ ಮತ್ತು ಮಕ್ಕಳ ಸೇವೆಗೆ ಅನುವಾಗುವಂತೆ ಈಗಿರುವ ಎಸ್.ಆರ್.ಬ್ಲಾಕ್ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಬೇಕು. ಆಸ್ಪತ್ರೆ ಆವರಣದಲ್ಲಿ ಒಳಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಮಾಡಬೇಕು. ಅದೇ ರೀತಿ, ಮಹಿಳಾ ಹಾಗೂ ಪುರುಷರ ವಸತಿ ನಿಲಯಗಳಿಗೆ ಸೌಲಭ್ಯವನ್ನು ಹೆಚ್ಚಿಸಲು ಅನುದಾನ ಒದಗಿಸಬೇಕು’ ಎಂದು ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕಿ ಡಾ. ಜಯಂತಿ ಮನವಿ ಮಾಡಿದರು.

‘ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು (ಎನ್‍ಪಿಎಸ್) ಜಾರಿಗೊಳಿಸಿ, ಬಜೆಟ್‍ನಲ್ಲಿ ಅನುದಾನ ನೀಡಬೇಕು’ ಎಂದು ಬಿಎಂಸಿಆರ್‌ಐ ಅಡಿಯಲ್ಲಿನ ಶುಶ್ರೂಷಕರ ಸಂಘವು ಮನವಿ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.