ADVERTISEMENT

212 ವೈದ್ಯಕೀಯ ವಿದ್ಯಾರ್ಥಿಗಳ ಫಲಿತಾಂಶ ತಡೆ!

ಸೀಟು ತಡೆಹಿಡಿದು ಲಾಭ ಮಾಡಿಕೊಳ್ಳುವ ದಂಧೆಯ ಪರಿಣಾಮ ಶಂಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 20:07 IST
Last Updated 4 ಸೆಪ್ಟೆಂಬರ್ 2019, 20:07 IST
   

ಬೆಂಗಳೂರು: ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 212 ಎಂಬಿಬಿಎಸ್‌ ವಿದ್ಯಾರ್ಥಿಗಳ ಮೊದಲ ವರ್ಷದ ಫಲಿತಾಂಶವನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ತಡೆ ಹಿಡಿದಿದ್ದು, ಸೀಟು ತಡೆಹಿಡಿದು ಲಾಭ ಮಾಡಿಕೊಳ್ಳುವ ದಂಧೆಯಲ್ಲಿ ತೊಡಗಿದ್ದಕ್ಕೇ ಈ ‘ಶಿಕ್ಷೆ’ ನೀಡಲಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ನೀಟ್‌ನಲ್ಲಿ ಉತ್ತಮ ರ‍್ಯಾಂಕ್‌ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಇತರ ಭಾಗಗಳಲ್ಲಿ ವೈದ್ಯಕೀಯ ಸೀಟು ಪಡೆದಿದ್ದರು. ಅವರು ಬಿಟ್ಟುಕೊಟ್ಟ ಸೀಟುಗಳನ್ನು ಕೊಂಡುಕೊಳ್ಳಲು ಖಾಸಗಿ ಕಾಲೇಜುಗಳುಪ್ರೇರೇಪಿಸಿದ ಮೇರೆಗೆ ಈ ವಿದ್ಯಾರ್ಥಿಗಳು ಸೀಟು ಆಯ್ಕೆ ಮಾಡಿಕೊಂಡಿದ್ದರು.

2018–19ರ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೀಟು ತಡೆಹಿಡಿಯುವ ದಂಧೆ ಬೆಳಕಿಗೆ ಬಂದಿತ್ತು. ಈ 212 ವಿದ್ಯಾರ್ಥಿಗಳ ಪ್ರವೇಶಾತಿಗೆ ಸರ್ಕಾರದ ಅನುಮತಿ ದೊರೆತಿಲ್ಲ ಎಂದು ವಿ.ವಿ ಆಗಲೇ ಸರ್ಕಾರವನ್ನು ಎಚ್ಚರಿಸಿತ್ತು. ಹಗರಣದತನಿಖೆ ಕಾಯ್ದಿರಿಸಿದ ಸರ್ಕಾರ, ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿತ್ತು. ಮುಂದೇನು ಎಂದು ವಿ.ವಿ ಸರ್ಕಾರಕ್ಕೆ ಪತ್ರ ಬರೆದಿದ್ದು, ನಿರ್ದೇಶನಕ್ಕೆ ಕಾದಿದೆ.

ADVERTISEMENT

‘ಸರ್ಕಾರದಿಂದ ಯಾವುದೇ ಸೂಚನೆ ಇದುವರೆಗೆ ಬಂದಿಲ್ಲ. ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆದು ಆದೇಶ ನೀಡಲು ಕೋರಿದ್ದೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿಡಾ.ಸಚ್ಚಿದಾನಂದ ತಿಳಿಸಿದರು.

ಕಳೆದ ವರ್ಷ ಸರ್ಕಾರದ ಮಟ್ಟದಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಅವರುಪ್ರಕರಣದ ಬಗ್ಗೆ ತನಿಖೆಗೆ ಸಮಿತಿರಚಿಸಿದ್ದರು. ಇದೊಂದು ಸೀಟು ತಡೆಹಿಡಿಯುವ ದಂಧೆ ಎಂಬುದು ಸಚಿವರಿಗೂ ಮನವರಿಕೆಯಾಗಿತ್ತು.

‘ಆರಂಭಿಕ ಮಾಪ್‌ ಅಪ್‌ ಸುತ್ತಿನ ಬಳಿಕ ಈ ಸೀಟುಗಳನ್ನು ಬಿಟ್ಟುಕೊಡಲಾಗಿದೆ. ಇವರೆಲ್ಲರೂ ನೀಟ್‌ನಲ್ಲಿ 15 ಸಾವಿರ ರ‍್ಯಾಂಕ್‌ನೊಳಗೆ ಇದ್ದವರು. ಈ ವಿದ್ಯಾರ್ಥಿಗಳು ಸೀಟು ತಡೆಹಿಡಿಯುವ ದಂಧೆಯಲ್ಲಿ ತೊಡಗಿರುವ ಶಂಕೆ ಇರುವುದರಿಂದ ದೇಶದ ಇತರ ಭಾಗ
ಗಳಲ್ಲಿ ಇವರು ಪಡೆದ ಸೀಟುರದ್ದತಿಗೆ ಭಾರತೀಯ ವೈದ್ಯಕೀಯ ಮಂಡಳಿಯನ್ನು ಒತ್ತಾಯಿಸಬೇಕು’ ಎಂದು ಸಚಿವ ತುಕಾರಾಂ ಅಂದು ತಿಳಿಸಿದ್ದರು. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪರಿಗಣಿಸಲು ರಚಿಸಲಾದ ಸಮಿತಿಯ ಅಂತಿಮ ಶಿಫಾರಸು ಆಧರಿಸಿ ಈ 212 ವಿದ್ಯಾರ್ಥಿಗಳ ಭವಿಷ್ಯ ನಿಂತಿದೆ ಎಂದೂ ಸಚಿವರು ಹೇಳಿದ್ದರು.

‘ಕಳೆದ ವರ್ಷ ಸರ್ಕಾರ ಮತ್ತು ಕಾಲೇಜುಗಳ ನಡುವಿನ ಒಪ್ಪಂದದಲ್ಲಿನ ಗೊಂದಲದಿಂದ ಈ ಬಿಕ್ಕಟ್ಟು ನೆಲೆಸಿದೆ. ವಿದ್ಯಾರ್ಥಿಗಳು ಕಾಲೇಜುಗಳಿಗೇ ನೇರವಾಗಿ ಸೀಟು ಬಿಟ್ಟುಕೊಡುವ ಅವಕಾಶ ಇತ್ತು. ಈ ಬಾರಿ ಈ ನಿಯಮ ಬದಲಿಸಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೀಟು ಬಿಟ್ಟುಕೊಡುವಂತೆ ಮಾಡಿದ್ದೇವೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.