ADVERTISEMENT

ಪಾರ್ಕಿನ್ಸನ್ ರೋಗಕ್ಕೆ ಔಷಧ ಲಭ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:10 IST
Last Updated 6 ಡಿಸೆಂಬರ್ 2018, 19:10 IST

ಬೆಂಗಳೂರು: ಜನರನ್ನು ಬಾಧಿಸುತ್ತಿರುವ ಪಾರ್ಕಿನ್ಸನ್ ರೋಗಕ್ಕೆ ಇದೀಗ ಹೊಸ ಔಷಧ ಲಭ್ಯವಾಗಿದೆ. ಇದು ವಿಕ್ರಂ ಆಸ್ಪತ್ರೆ ಸೇರಿದಂತೆ ದೇಶದ ಆಯ್ದ ಕೇಂದ್ರಗಳಲ್ಲಿ ಮಾತ್ರ ದೊರೆಯಲಿದೆ.

ಯುಕೆ ಬ್ರಿಟಾನಿಯಾ ಫಾರ್ಮಸೂಟಿಕಲ್ಸ್ ಉತ್ಪಾದಿತ ‘ಅಪೊಮಾರ್ಫೀನ್’ ಎಂಬ ಚುಚ್ಚುಮದ್ದು ಹಾಗೂ ಇನ್‍ಫ್ಯೂಷನ್ ಪಂಪ್‍ಗಳಲ್ಲಿ ಔಷಧ ಲಭ್ಯವಿದ್ದು, ಗುರುವಾರ ವಿಕ್ರಂ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಔಷಧವನ್ನು ಬಿಡುಗಡೆ ಮಾಡಲಾಯಿತು.

ಈ ಕುರಿತು ಆಸ್ಪತ್ರೆಯ ಪಾರ್ಕಿನ್ಸನ್‌ ರೋಗ ತಜ್ಞ ಡಾ. ಎಲ್.ಕೆ.ಪ್ರಶಾಂತ್‍ ಮಾತನಾಡಿ, ‘ಈ ತನಕ ರೋಗಿಗಳು ಮಾತ್ರೆ ಅಥವಾ ದುಬಾರಿ ಮಿದುಳಿನ ಉತ್ತೇಜನ (ಡಿಬಿಎಸ್) ಶಸ್ತ್ರಚಿಕಿತ್ಸೆ ಪಡೆಯಬೇಕಿತ್ತು. ಆದರೆ, ರೋಗ್ಯದ ಮಧ್ಯಮ ಹಂತದಲ್ಲಿ ಯಾವುದೇ ಚಿಕಿತ್ಸೆ ಇರಲಿಲ್ಲ. ಈ ಔಷಧ ಮಿದುಳಿನ ನರ ಹಾಗೂ ಜೀವಕೋಶಗಳಲ್ಲಿ ಡೊಕೊಮೈನ್ ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕ ರೋಗಿಗಳಿಗೆ ಶೀಘ್ರ ಪರಿಹಾರ ನೀಡಲಿದೆ’ ಎಂದರು.

ADVERTISEMENT

ಆಸ್ಪತ್ರೆಯ ಪಾರ್ಕಿನ್ಸನ್‌ ರೋಗ ತಜ್ಞ ಡಾ. ಶಿವಂ ಓಂ ಮಿತ್ತಲ್ ಮಾತನಾಡಿ, ‘ದೇಶದಲ್ಲಿ ಪ್ರಸ್ತುತ ಒಂದು ಲಕ್ಷ ಜನರ ಪೈಕಿ 300-400 ಜನರಲ್ಲಿ ಪಾರ್ಕಿನ್ಸನ್ ರೋಗ ಕಾಣಿಸಿಕೊಳ್ಳುತ್ತಿದೆ. 2030ರ ಹೊತ್ತಿಗೆ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಯುವಜನರಲ್ಲೂ ಈ ತೊಂದರೆ ಕಾಣಿಸಿಕೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘20 ವರ್ಷದೊಳಗಿನವರಲ್ಲಿಯೂ ಈ ರೋಗದ ಲಕ್ಷಣಗಳು ಕಂಡುಬರಬಹುದು. ಪಾರ್ಕಿನ್ಸನ್ ಶಂಕಿತ ರೋಗಿಗಳಿಗೆ ಡೊಪಮೈನ್‍ ಇಮೇಜಿಂಗ್‍ ಎಂಬ ವೈದ್ಯಕೀಯ ಪರೀಕ್ಷೆ ಮಾಡಿಸಬಹುದಾಗಿದ್ದು, ಇದು ಆಯ್ದ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದೆ’ ಎಂದರು.

ರೋಗ ಲಕ್ಷಣಗಳು: ಮಾಂಸಖಂಡಗಳ ಸಡಿಲಿಕೆ, ನಡಿಗೆಯ ಶೈಲಿಯಲ್ಲಿ ಬದಲಾವಣೆ, ಕೈಗಳು ನಡುಗುವುದು, ವಾಸನೆಯ ಸಂವೇದನೆ ಕಡಿಮೆಯಾಗುವುದು, ನಿದ್ರೆಯಲ್ಲಿ ಕೂಗುವುದು, ಕಿರುಚುವುದು, ನಡುಕ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.