ADVERTISEMENT

ಮೇಕೆದಾಟು ಪಾದಯಾತ್ರೆಯ ಲಾಭ ತಮಿಳುನಾಡಿಗೆ: ಅಶೋಕ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 10:48 IST
Last Updated 17 ಜನವರಿ 2022, 10:48 IST
ಮೇಕೆದಾಟು ಪಾದಯಾತ್ರೆಯ ಲಾಭ ತಮಿಳುನಾಡಿಗೆ: ಅಶೋಕ
ಮೇಕೆದಾಟು ಪಾದಯಾತ್ರೆಯ ಲಾಭ ತಮಿಳುನಾಡಿಗೆ: ಅಶೋಕ   

ಬೆಂಗಳೂರು: ಕಾಂಗ್ರೆಸ್‌ ನಡೆಸಿದ ಮೇಕೆದಾಟು ಪಾದಯಾತ್ರೆಯಿಂದ ತಮಿಳುನಾಡಿಗೆ ಅನುಕೂಲವಾಗುವ ಸಾಧ್ಯತೆಯೇ ಹೆಚ್ಚು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ಪಾದಯಾತ್ರೆ ಅಥವಾ ಹೋರಾಟದಿಂದ ಯಾವುದೇ ನೀರಾವರಿ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಈ ಹಿಂದೆ ಎಸ್‌.ಎಂ.ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದರು. ಆದರೆ, ನ್ಯಾಯಾಲಯ ಛೀಮಾರಿ ಹಾಕಿತು. ಇಂತಹ ಹೋರಾಟಗಳ ಮೂಲಕ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಅಥವಾ ಒತ್ತಡ ಹಾಕಲು ಸಾಧ್ಯವಿಲ್ಲ. ಮೇಕೆದಾಟಿನ ವಿಚಾರದಲ್ಲೂ ಎಷ್ಟು ಹೋರಾಟ ಮಾಡುತ್ತಾರೊ ಅಷ್ಟು ತಮಿಳುನಾಡಿನ ಪಾಲಿಗೆ ವರವಾಗಲಿದೆ. ಮೇಕೆದಾಟು ನೀರಿನಿಂದ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಬಳಸುತ್ತೇವೆ ಎಂದೂ ಹೇಳಿದ್ದಾರೆ. ಈ ಎಲ್ಲ ಮಾತುಗಳೂ ಕೂಡ ರೆಕಾರ್ಡ್‌ ಆಗಿವೆ. ತಮಿಳುನಾಡು ಇದನ್ನೇ ಅಸ್ತ್ರ ಮಾಡಿಕೊಂಡು ನ್ಯಾಯಾಲಯದಲ್ಲಿ ಬಳಸುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಪಾದಯಾತ್ರೆಗೂ ಮುನ್ನ ಇವೆಲ್ಲ ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಿತ್ತು. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಆ ಬಗ್ಗೆ ಗಮನ ಕೊಡದೇ ಹೋರಾಟ ಮಾಡಿದರೆ ರಾಜ್ಯ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಇವರು ಪಾದಯಾತ್ರೆ ಮಾಡಿದ್ದು ತಮಿಳು ನಾಡು ವಿರುದ್ಧವೊ ನ್ಯಾಯಾಲಯದ ವಿರುದ್ಧವೊ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅಶೋಕ ಹೇಳಿದರು.

ಕಾಂಗ್ರೆಸ್‌ನವರು ಬೆಟ್ಟ ಅಗೆದು ಇಲಿಯನ್ನೂ ಸಹಿತ ಹಿಡಿಯಲು ಸಾಧ್ಯವಾಗಲಿಲ್ಲ. ಪಾದಯಾತ್ರೆಯಲ್ಲಿ ಯಾರು ಮುಂಚೂಣಿಯಲ್ಲಿ ಇರಬೇಕು. ಸಿದ್ದರಾಮಯ್ಯ ಅವರೊ ಡಿ.ಕೆ.ಶಿವಕುಮಾರ್ ಅವರೊ ಎಂಬ ಬಗ್ಗೆ ಶೀತಲ ಸಮರವೇ ನಡೆದಿತ್ತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.