ADVERTISEMENT

ಬೆಂಗಳೂರು: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 15:58 IST
Last Updated 9 ಜುಲೈ 2025, 15:58 IST
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು
–ಪ್ರಜಾವಾಣಿ ಚಿತ್ರ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ , ಸತ್ತೇಗಾಲ ಕುಡಿಯುವ ನೀರು ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ಮೇಕೆದಾಟು ಬಳಿ ತ್ವರಿತವಾಗಿ 67 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣ ಮಾಡಬೇಕು. ಇದಕ್ಕೆ ಅಡ್ಡಿಪಡಿಸುತ್ತಿರುವ ತಮಿಳುನಾಡು ಸರ್ಕಾರದ ಜೊತೆ ರಾಜ್ಯ ಸರ್ಕಾರ ಮಾತುಕತೆ ನಡೆಸಿ, ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು. ಕುಡಿಯುವ ನೀರಿನ ಅಗತ್ಯ, ಇದರಿಂದ ಆಗುವ ಲಾಭ–ನಷ್ಟದ ಸಮಗ್ರ ಮಾಹಿತಿಯನ್ನು ಕೇಂದ್ರ ಪರಿಸರ, ಅರಣ್ಯ ಇಲಾಖೆ ಮತ್ತು ಸುಪ್ರಿಂ ಕೋರ್ಟ್‌ಗೆ ನೀಡಿ ಅನುಮತಿ ಪಡೆಯಬೇಕು. ಸತ್ತೇಗಾಲ ಕುಡಿಯುವ ನೀರಿನ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ಮೂಲಕ ನಮ್ಮ ಪಾಲಿನ 3.3 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿಯುವುದನ್ನು ನಿಲ್ಲಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ರಮೇಶ ಗೌಡ ಮಾತನಾಡಿ, ‘ಕಾವೇರಿ ಮತ್ತು ಅದರ ಉಪ ನದಿಗಳ ನೀರನ್ನು ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಬಳಸಬೇಕು. ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮರೆತು, ಒಗ್ಗಟ್ಟು ಪ್ರದರ್ಶಿಸಬೇಕು. ಮೇಕೆದಾಟು ಅಣೆಕಟ್ಟು ನಿರ್ಮಾಣ, ಸತ್ತೇಗಾಲ ಕುಡಿಯುವ ನೀರು ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಡಿಸೆಂಬರ್‌ 1ರಂದು ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ವೇದಿಕೆಯ ರಾಜ್ಯ ಘಟಕ ಉಪಾಧ್ಯಕ್ಷರಾದ ರಂಜಿತ್‌ಗೌಡ, ಬೆಂಕಿ ಶ್ರೀಧರ, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಶ್‌ ಗೌಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.