ADVERTISEMENT

ಬೆಂಗಳೂರು ನಮ್ಮ ಹೆಮ್ಮೆ: ‘ಮೇಖ್ರಿ’ ಸರ್ಕಲ್‌ಗೆ ಅರಬ್‌ ವ್ಯಾಪಾರಿ ನಂಟು!

ಎತ್ತಿನ ಗಾಡಿಗಳು ಚಲಿಸಲು ಕಷ್ಟವಾಗಿದ್ದ ರಸ್ತೆಗೆ ಸ್ವಂತದ ₹10 ಸಾವಿರ ಖರ್ಚು ಮಾಡಿ ಕಾಯಕಲ್ಪ

ಸಚ್ಚಿದಾನಂದ ಕುರಗುಂದ
Published 12 ಮಾರ್ಚ್ 2022, 19:55 IST
Last Updated 12 ಮಾರ್ಚ್ 2022, 19:55 IST
   

ಬೆಂಗಳೂರು: ಎತ್ತಿನ ಗಾಡಿಗಳು ಸಂಚಾರ ವ್ಯವಸ್ಥೆಯ ಪ್ರಮುಖವಾಗಿದ್ದ ಸಂದರ್ಭದಲ್ಲಿ ಅರಬ್‌ ವ್ಯಾಪಾರಿಯೊಬ್ಬರು ದೇಣಿಗೆ ನೀಡಿ ನಿರ್ಮಿಸಿದ್ದ ರಸ್ತೆ ಇದು.

ಇಂದು ನಗರದ ಪ್ರಮುಖ ವೃತ್ತದ ಭಾಗವಾಗಿರುವ ಈ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಮಾರ್ಗ ಸದಾ ದಟ್ಟಣೆಯಿಂದ ಕೂಡಿರುತ್ತದೆ. ಉತ್ತರದಿಂದ ದಕ್ಷಿಣ ಮತ್ತು ಪಶ್ಚಿಮ ಮತ್ತು ಪೂರ್ವ ದಿಕ್ಕುಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಇತಿಹಾಸದ ಪುಟಗಳಲ್ಲಿಯೂ ವಿಶೇಷ ಸ್ಥಾನ.‌

ಕಡಿದಾಗಿದ್ದ ಈ ಮಾರ್ಗಕ್ಕೆ ಸ್ವಂತ ಹಣದಿಂದ ಕಾಯಕಲ್ಪ ನೀಡಿದವರು ಇನಾಯಿತ್‌ಉಲ್ಲಾ ಮೇಖ್ರಿ ಅವರು. ಹೀಗಾಗಿ, ಅವರ ಹೆಸರನ್ನೇ ಈ ವೃತ್ತಕ್ಕೆ ಇಡಲಾಗಿದೆ. ಇದು ಮೇಖ್ರಿ ಸರ್ಕಲ್‌ ಎಂದೇ ಜನಜನಿತವಾಗಿದೆ.

ADVERTISEMENT

ಹೆಬ್ಬಾಳ ಕೆರೆ ಮೂಲಕ ಸಾಗುವ ಈ ಮಾರ್ಗದಲ್ಲಿ ಎತ್ತಿನ ಗಾಡಿಗಳು ಸಾಗಲು ಪ್ರಯಾಸ ಪಡುತ್ತಿದ್ದವು. ಹಲವು ಸಂದರ್ಭಗಳಲ್ಲಿ ರಸ್ತೆಯಲ್ಲೇ ರೈತರ ಗಾಡಿಗಳು ಕುಸಿದು ಬೀಳುತ್ತಿದ್ದವು. ಎತ್ತುಗಳು ಗಾಯಗೊಳ್ಳುತ್ತಿದ್ದವು. ಇದರಿಂದ ಸರಕು ಸಾಗಾಣಿಕೆಗೆ ಮತ್ತು ಜನರ ಪ್ರಯಾಣಕ್ಕೂ ತೊಡಕಾಗಿತ್ತು. ಈ ಮಾರ್ಗದಲ್ಲಿ ಸಾಗುವುದು ಹರಸಾಹಸವಾಗಿತ್ತು. ಈ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ಕಂಡ ಇನಾಯಿತ್‌ಉಲ್ಲಾ ಮೇಖ್ರಿ ಅವರು 1930ರಲ್ಲಿ ₹10 ಸಾವಿರ ಖರ್ಚು ಮಾಡಿ ರಸ್ತೆಯನ್ನು ಸಮತಟ್ಟಾಗಿ ಮಾಡಿ ಎತ್ತಿನ ಗಾಡಿಗಳು ಸುಗಮವಾಗಿ ಸಂಚರಿಸುವ ಮಾರ್ಗವನ್ನು ನಿರ್ಮಿಸಿದರು. ಇದರಿಂದ, ಸಂಚಾರ ಸುಗಮವಾಗಿತ್ತು. ಮೇಖ್ರಿ ಅವರ ಈ ಕಾರ್ಯವೂ ಜನರ ಪ್ರಶಂಸೆಗೆ ಪಾತ್ರವಾಗಿತ್ತು.

ಮೇಖ್ರಿ ಅವರ ಈ ಪರೋಪಕಾರಿ ಕಾರ್ಯವು ಆಗ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಗಮನಕ್ಕೆ ಬಂದಾಗ ಮಹಾರಾಜ ಕೃಷ್ಣರಾಜ ಒಡೆಯರ್‌ ಅವರಿಗೆ ವಿಷಯ ತಿಳಿಸಿದರು. ಸಾರ್ವಜನಿಕರಿಗಾಗಿ ಕೈಗೊಂಡ ಈ ಕಾರ್ಯವನ್ನು ಶ್ಲಾಘಿಸಿದ ಒಡೆಯರ್‌ ಅವರು ಬಳ್ಳಾರಿ ರಸ್ತೆ, ಜಯಮಹಲ್‌ ರಸ್ತೆ ಮತ್ತು ರಾಮನ್‌ ಸಂಶೋಧನಾ ಸಂಸ್ಥೆಯನ್ನು ಸಂಧಿಸುವ ವೃತ್ತಕ್ಕೆ ಇನಾಯಿತ್‌ಉಲ್ಲಾ ಮೇಖ್ರಿ ಅವರ ಹೆಸರನ್ನೇ ಇರಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.

‘ಇನಾಯತ್‌ಉಲ್ಲಾ ಮೇಖ್ರಿ ಸ್ಕ್ವೈರ್‌’ ಎಂದು ಕರೆಯಲಾಗಿದ್ದ ಈ ಮಾರ್ಗವನ್ನು ಮದ್ರಾಸ್‌ ಪ್ರೆಸಿಡೆನ್ಸಿಯ ಗವರ್ನರ್‌ ಸರ್‌ ಜಾನ್‌ ಹೋಪ್‌ ಅವರು 1937ರ ಏಪ್ರಿಲ್‌ನಲ್ಲಿ ಉದ್ಘಾಟಿಸಿದ್ದರು. ಇಲ್ಲಿ ಆಗ ಐದು ದೀಪಗಳಿರುವ ಕಂಬಗಳನ್ನು ಸ್ಥಾಪಿಸಲಾಗಿತ್ತು. ನಂತರ, 1965ರಲ್ಲಿ ‘ಇಯಾತ್‌ಉಲ್ಲಾ ಮೇಖ್ರಿ ವೃತ್ತ’ ಎಂದು ಸರ್ಕಾರ ಮರುನಾಮಕರಣ ಮಾಡಿತು.

ಸೌದಿ ಅರೇಬಿಯಾ ಮೂಲದ ಮೇಖ್ರಿ ಅವರು ಭಾರತಕ್ಕೆ ವಲಸೆ ಬಂದಿದ್ದರು. ಸಾಮಾಜಿಕ ಸೇವೆಯಿಂದ ಗುರುತಿಸಿಕೊಂಡಿದ್ದ ಮೇಖ್ರಿ ಅವರು, ಬೆಂಗಳೂರಿನ ನಗರ ಪಾಲಿಕೆ ಸೇರಿದಂತೆ ವಿವಿಧ ಹುದ್ದೆಗಳಲ್ಲೂ ಕಾರ್ಯನಿರ್ವಹಿಸಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಳ್ಳಾರಿ, ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವ ಈ ಸ್ಥಳ ಈಗ ವಿಶಾಲವಾಗಿದೆ. ಆದರೆ, ಈ ವೃತ್ತದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ರೀತಿಯಲ್ಲಿ ಸ್ಥಳದಲ್ಲೇಮಾಹಿತಿ ಫಲಕ ಹಾಕಬೇಕು ಮತ್ತು ಆಕರ್ಷಕವನ್ನಾಗಿ ಮಾಡಬೇಕು’ ಎನ್ನುವುದು
ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.