ADVERTISEMENT

ಸಂಶೋಧನೆಗಳ ಉಪಯೋಗ ಜನರಿಗೆ ತಲುಪಲಿ: ಆರೋಗ್ಯ ತಜ್ಞರ ಸಲಹೆ

‘ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ– ಮನೋತ್ಸವ’ ಸಂಪನ್ನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 18:45 IST
Last Updated 9 ನವೆಂಬರ್ 2025, 18:45 IST
ಧ್ವನಿ ಬಳಕೆ ಬಗೆಗಿನ ಕಾರ್ಯಾಗಾರವನ್ನು ನರವಿಜ್ಞಾನಿ ದಲಾಲ್‌ ಅಬು ಅಮ್ನೇಹ್‌ ನಡೆಸಿಕೊಟ್ಟರು
ಪ್ರಜಾವಾಣಿ ಚಿತ್ರ
ಧ್ವನಿ ಬಳಕೆ ಬಗೆಗಿನ ಕಾರ್ಯಾಗಾರವನ್ನು ನರವಿಜ್ಞಾನಿ ದಲಾಲ್‌ ಅಬು ಅಮ್ನೇಹ್‌ ನಡೆಸಿಕೊಟ್ಟರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಸಂಶೋಧನೆಗಳ ಉಪಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಹೆಚ್ಚಬೇಕು’ ಎಂದು ಮಾನಸಿಕ ಆರೋಗ್ಯ ತಜ್ಞರು ಸಲಹೆ ನೀಡಿದರು.

ನಗರದಲ್ಲಿ ರೋಹಿಣಿ ನಿಲೇಕಣಿ ಫಿಲಾಂತ್ರೊಪಿಸ್ ಫೌಂಡೇಷನ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಮತ್ತು ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಸಂಸ್ಥೆ (ಎನ್‌ಸಿಬಿಎಸ್) ಜಂಟಿಯಾಗಿ ಆಯೋಜಿಸಿದ್ದ ‘ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ– ಮನೋತ್ಸವ’ದ ಎರಡನೇ ದಿನವಾದ ಭಾನುವಾರ ಚರ್ಚೆಗಳು ನಡೆದವು.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶುಭ್ರಾ ಪ್ರಿಯದರ್ಶಿನಿ, ಡಾ. ಅಲೋಕ್ ಸರಿನ್, ಅದಿತಿ ತಂಡೊನ್ ಮತ್ತು ಕಾಜ್ ದೇ ಜೊಂಗ್ ಸಂವಾದದಲ್ಲಿ ಭಾಗಿಯಾಗಿ ಹಲವು ವಿಚಾರಗಳನ್ನು ಹಂಚಿಕೊಂಡರು.

ADVERTISEMENT

‘ಬದಲಾದ ಜೀವನಶೈಲಿಯಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿರುವ ಅಂಶಗಳು ಸಂಶೋಧನೆಯಿಂದ ಹೊರಬರುತ್ತಿವೆ. ಇವುಗಳಿಗೆ ತಜ್ಞರು ತಿಳಿಸುವ ಪರಿಹಾರೋಪಾಯಗಳು ಹೆಚ್ಚು ಜನರಿಗೆ ತಲುಪಬೇಕಿದೆ. ಸಂಶೋಧನೆಯ ಭಾಗವಾಗಿ ಉತ್ಸವದಲ್ಲಿ ವ್ಯಕ್ತವಾದ ಅಭಿಪ್ರಾಯ, ಮಾದರಿಗಳು ಜನರ ಉಪಯೋಗಕ್ಕೆ ಬರುವಂತೆ ಆಗಲಿ’ ಎಂದು ಹೇಳಿದರು.

ಧ್ವನಿ ಬಳಕೆ ಬಗೆಗಿನ ಕಾರ್ಯಾಗಾರದಲ್ಲಿ ನರವಿಜ್ಞಾನಿ ದಲಾಲ್‌ ಅಬು ಅಮ್ನೇಹ್‌ ಸಂವಾದ ನಡೆಸಿದರು. ಧ್ವನಿ ಏರಿಳಿತಗಳ ಕುರಿತು ಹಲವರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು.

ದೇಶ, ವಿದೇಶದಿಂದ ಬಂದಿದ್ದ 130ಕ್ಕೂ ಹೆಚ್ಚು ತಜ್ಞರು, 26 ಗೋಷ್ಠಿ ಮತ್ತು ಸಂವಾದಗಳಲ್ಲಿ ಭಾಗಿಯಾದರು. 23 ಕಾರ್ಯಾಗಾರಗಳು ನಡೆದವು. 32 ಮಳಿಗೆಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಕೆಗಳ ಪ್ರದರ್ಶನ ಗಮನ ಸೆಳೆಯಿತು. 

ಪೋಷಕರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ವೈದ್ಯರು, ಕಲಾವಿದರು, ಸ್ವಯಂ ಸೇವಾ ಸಂಘಟನೆಗಳ ಪ್ರಮುಖರು ಎರಡು ದಿನದ ಮನೋತ್ಸವದಲ್ಲಿ ಭಾಗಿಯಾಗಿ, ಅರ್ಥಪೂರ್ಣ ಚರ್ಚೆ, ಸಂವಾದ, ಚಟುವಟಿಕೆಗೆ ಒತ್ತು ನೀಡಿದರು.

‘ಎರಡು ದಿನದಲ್ಲಿ ಸುಮಾರು 6 ಸಾವಿರ ಮಂದಿ ಮನೋತ್ಸವಕ್ಕೆ ಭೇಟಿ ನೀಡಿದ್ದರು’ ಎಂದು ಸಂಘಟಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.