ADVERTISEMENT

ಮಾನಸಿಕ ಅಸ್ವಸ್ಥರಿಗೆ ಆರೈಕೆ ಕೇಂದ್ರ ಅಗತ್ಯ: ನಿವೃತ್ತ ನ್ಯಾ. ಎನ್‌.ಕುಮಾರ್‌

ದುಂಡುಮೇಜಿನ ಸಭೆಯಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 23:13 IST
Last Updated 21 ಡಿಸೆಂಬರ್ 2025, 23:13 IST
   

ಬೆಂಗಳೂರು: ‘ನಿರಾಶ್ರಿತ ಮಾನಸಿಕ ಅಸ್ವಸ್ಥರ ಸಮಗ್ರ ಚಿಕಿತ್ಸೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ (ಇಸಿಆರ್‌ಸಿ) ಪ್ರಾರಂಭಿಸಬೇಕು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. 

ನಿರಾಶ್ರಿತ ಮಾನಸಿಕ ಅಸ್ವಸ್ಥರ ಸಮಗ್ರ ಆರೈಕೆ ಸೇವೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಲದಮರ ಫೌಂಡೇಷನ್‌ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.

‘ಹಾಲಿ ವ್ಯವಸ್ಥೆಯಡಿ ನಿರಾಶ್ರಿತ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಆಶ್ರಯ ಸಹಿತ ಚಿಕಿತ್ಸೆ ಒದಗಿಸುವುದು ಕಷ್ಟಸಾಧ್ಯ. ಆದ್ದರಿಂದ ಅವರ ಚಿಕಿತ್ಸೆಗೆ ಅಗತ್ಯ ಸಿಬ್ಬಂದಿಯನ್ನು ಗುರುತಿಸಿ, ತರಬೇತಿ ಒದಗಿಸಬೇಕು. ಈ ಕೆಲಸ ಎಲ್ಲ ಜಿಲ್ಲೆಗಳಲ್ಲೂ ಆಗಬೇಕು. ಮಾನಸಿಕ ಅಸ್ವಸ್ಥರು ಹಲವು ಬಾರಿ ನಂಬಿಕೆ ದ್ರೋಹ, ಕಿರುಕುಳ ಎದುರಿಸಿರುತ್ತಾರೆ. ಆರ್ಥಿಕ, ಲೈಂಗಿಕ ಕಿರುಕುಳಗಳೂ ಅವರ ಮೇಲೆ ನಡೆಯುವ ಸಾಧ್ಯತೆ ಇರುತ್ತದೆ. ಆರೋಗ್ಯ ಕಾರ್ಯಕರ್ತರು, ಮನೋವೈದ್ಯರು ಅವರನ್ನು ಕಾಳಜಿಯಿಂದ ಕಂಡು, ವಿಶ್ವಾಸಕ್ಕೆ ಪಡೆದುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಆಲದಮರ ಫೌಂಡೇಷನ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಕುಮಾರ್‌ ಕೆ.ವಿ., ‘ರಾಜ್ಯ ಸರ್ಕಾರದ ಸಹಯೋಗದಲ್ಲಿ ಎಲ್ಲ ಜಿಲ್ಲೆಗಳಲ್ಲಿ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ ಪ್ರಾರಂಭಕ್ಕೆ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಸರ್.ಸಿ.ವಿ.ರಾಮನ್‌ ಆಸ್ಪತ್ರೆಯಲ್ಲಿ ಈ ಕೇಂದ್ರ ಆರಂಭಿಸಲಾಗಿದೆ. ಕೋಲಾರ, ಉಡುಪಿ ಸೇರಿ ಇತರ ಜಿಲ್ಲೆಗಳಲ್ಲಿ ಹಂತ, ಹಂತವಾಗಿ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಮಾನಸಿಕ ಅಸ್ವಸ್ಥರಿಗೆ ಆಹಾರ, ನೀರು ಒದಗಿಸುವುದು ಮುಖ್ಯ. ಅವರ ಇತರ ಕಾಯಿಲೆಗಳ ಬಗ್ಗೆಯೂ ತಿಳಿದು ಚಿಕಿತ್ಸೆ ನೀಡಬೇಕು. ಅವರು ಚೇತರಿಸಿಕೊಂಡು ಮನೆಗೆ ಸೇರಿದ ಬಳಿಕವೂ ನಿರಂತರ ನಿಗಾ ವಹಿಸಬೇಕಾಗುತ್ತದೆ. ಸ್ವಾವಲಂಬನೆಯ ಬದುಕು ನಡೆಸಲು ನಮ್ಮ ಸಂಸ್ಥೆಯಿಂದ ಅನುಕೂಲ ಮಾಡಿಕೊಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.