ADVERTISEMENT

ಮೇಸ್ತ್ರಿಪಾಳ್ಯ ಕೆರೆ ಪ್ರದೇಶ ಸರ್ವೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 19:46 IST
Last Updated 20 ಮಾರ್ಚ್ 2019, 19:46 IST

ಬೆಂಗಳೂರು: ಕೋರಮಂಗಲ ಸಮೀಪದ ಮೇಸ್ತ್ರಿಪಾಳ್ಯ ಕೆರೆ ಪ್ರದೇಶದ ಸರ್ವೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಆದೇಶಿಸಿತು. ಮೇಸ್ತ್ರೀಪಾಳ್ಯ ಕೆರೆ ಪ್ರದೇಶದ ಒತ್ತುವರಿಯಾಗಿದೆ ಎಂದು ಆರೋಪಿಸಿ
ಸಿಟಿಜನ್ ಆ್ಯಕ್ಷನ್ ಗ್ರೂಪ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಜೂನ್‌ಗೆ ಮುಂದೂಡಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಸರ್ವೆ ನಂಬರ್ 13ರಲ್ಲಿ 9ಎಕರೆ 18 ಗುಂಟೆ ಕೆರೆ
ಪ್ರದೇಶ ಇದೆ. ಆದರೆ, ಆ ಜಾಗ ಒತ್ತುವರಿಯಾಗಿಲ್ಲ. ಕೆಲವರು ಒತ್ತುವರಿ ಮಾಡಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ತಂತಿ ಬೇಲಿ ಅಳವಡಿಸಲಾಗಿದೆ. ಇನ್ನೂ ಸರ್ವೆ ನಂಬರ್ 26/1ರಲ್ಲಿ 5 ಎಕರೆ 23 ಗುಂಟೆ ಪ್ರದೇಶದಲ್ಲಿ ಉದ್ಯಾನವಿದ್ದು, ಅದರ ಸುತ್ತಲೂ ಗೇಟ್ ಹಾಕಿ ಸಂರಕ್ಷಿಸಲಾಗಿದೆ. ಒತ್ತುವರಿಗೆ ಅವಕಾಶ ನೀಡಿಲ್ಲ’ ಎಂದು ತಿಳಿಸಿದರು.

ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ‘ಕೆರೆ ಪ್ರದೇಶ ಒತ್ತುವರಿಯಾಗಿದೆ. ಉದ್ಯಾನದ ಬಳಿಯ ವಾಹನ ನಿಲುಗಡೆ ಜಾಗವನ್ನು ಬೀದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದಾರೆ. ವಾಯುವಿಹಾರಕ್ಕೆ ಬರುವವರು ವಾಹನ ನಿಲ್ಲಿಸಲು ಇದರಿಂದಾಗಿ ತೊಂದರೆಯಾಗಿದೆ’ ಎಂದು ಆರೋಪಿಸಿದರು.

ADVERTISEMENT

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕೆರೆ ಪ್ರದೇಶ ಒತ್ತುವರಿಯಾಗಿಲ್ಲ ಎಂದು ಬಿಬಿಎಂಪಿ ವಾದಿಸುತ್ತಿದೆ. ಆದರೆ, ಅರ್ಜಿದಾರರು ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹಾಗಾಗಿ, ಕೆರೆಯ ಪ್ರದೇಶವು ಒತ್ತುವರಿ ಆಗಿದೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಸರ್ಕಾರ 8 ವಾರಗಳಲ್ಲಿ ಸರ್ವೆ ಕಾರ್ಯ ನಡೆಸಬೇಕು. ಈ ಸಮಯದಲ್ಲಿ ಅರ್ಜಿದಾರರು, ಬಿಡಿಎ ಹಾಗೂ ಬಿಬಿಎಂಪಿ ಎಂಜಿನಿಯರ್‌ಗಳು ಹಾಜರಿರಬೇಕು’ ಎಂದು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.