ADVERTISEMENT

#Metoo: ಬಿಕಿನಿ, ಮುತ್ತಿನ ಲೆಕ್ಕ ಇಟ್ಟವರಿಗೆ ಕ್ಯಾಮೆರಾ ಹಿಡಿತವಿಲ್ಲವೇ?

ಮೀ– ಟೂ ಅಭಿಯಾನಕ್ಕೆ ಲೇಖಕಿಯರ ಬೆಂಬಲ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 19:55 IST
Last Updated 11 ನವೆಂಬರ್ 2018, 19:55 IST
ಕಾರ್ಯಕ್ರಮದಲ್ಲಿ ಎಚ್.ಎಸ್.ಶ್ರೀಮತಿ ಮಾತನಾಡಿದರು (ಬಲತುದಿ). ಪತ್ರಕರ್ತೆ ಅರ್ಚನಾ ನಾಥನ್ ಮತ್ತು ಲೇಖಕಿ ವಿಜಯಾ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಎಚ್.ಎಸ್.ಶ್ರೀಮತಿ ಮಾತನಾಡಿದರು (ಬಲತುದಿ). ಪತ್ರಕರ್ತೆ ಅರ್ಚನಾ ನಾಥನ್ ಮತ್ತು ಲೇಖಕಿ ವಿಜಯಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಈ ಸಿನಿಮಾದಲ್ಲಿ ಇಷ್ಟೇ ಚುಂಬನ ಮಾಡಬೇಕಾಗುತ್ತದೆ. ಬಿಕಿನಿ ಹಾಗೂ ಟವಲ್‌ ಮಾತ್ರ ಧರಿಸಿ ನಟಿಸುವ ದೃಶ್ಯ ಇರಲಿದೆ ಎಂದೆಲ್ಲಾ ಒಪ್ಪಂದ ಮಾಡಿಕೊಳ್ಳುವ ನಿರ್ಮಾಪಕರು, ಕ್ಯಾಮೆರಾದ ಮೇಲೆ ಮಾತ್ರ ಹಿಡಿತ ಹೊಂದಿಲ್ಲ ಏಕೆ’

ಲೇಖಕಿ ಎಚ್‌.ಎಸ್‌.ಶ್ರೀಮತಿ ಅವರು ಸಿನಿಮಾರಂಗದ ಪ್ರಮುಖರನ್ನು ಉದ್ದೇಶಿಸಿ ಕೇಳಿದ ಪ್ರಶ್ನೆ ಇದು.

‘ಆಕೃತಿ ಪುಸ್ತಕ’ದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕೇಳಿಸಿಕೊಳ್ಳೋಣ’ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಭಾರತೀಯ ಸಿನಿಮಾಗಳಲ್ಲಿ ಮಹಿಳೆಯ ಚಿತ್ರಣ, ಮೀ– ಟೂ ಹಿನ್ನೆಲೆಯಲ್ಲಿ ಸ್ತ್ರೀ ಶೋಷಣೆ ಮತ್ತು ಸ್ತ್ರೀ ಸಮಾನತೆ–ಚಿಂತನೆ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಸಿನಿಮಾ ಮಂದಿ, ಕ್ಯಾಮೆರಾದ ದೃಶ್ಯಗಳಿಗೆ ಯಾವುದೇ ಕಡಿವಾಣ ಹಾಕಿಲ್ಲ. ಕ್ಯಾಮೆರಾ ಎಲ್ಲೆಲ್ಲಿ ಓಡುತ್ತದೆ ಎಂಬುದಕ್ಕೂ ಲಂಗು–ಲಗಾಮು ಇಲ್ಲ. ಹೆಣ್ಣನ್ನು ‘ಸೆಕ್ಸಿ’ ಎನ್ನುವ ಅರ್ಥದಲ್ಲಿ ಮಾತ್ರ ನೋಡಲಾಗುತ್ತಿರುವುದು ಈ ಕ್ಷೇತ್ರದ ದುರಂತ’ ಎಂದು ಟೀಕಿಸಿದರು.

‘ಸಿನಿಮಾ ಕ್ಷೇತ್ರ, ಕಲಾ ಪ್ರಕಾರವಾಗಿ ಉಳಿದಿಲ್ಲ. ಮಹಿಳೆಯರು ನಿರ್ದೇಶನ ಮಾಡಿದ ಸಿನಿಮಾಗಳಲ್ಲೂ ‘ಆಕೆ’ ಅಸ್ಮಿತೆ ಕಂಡುಕೊಂಡಿಲ್ಲ. ಅಲ್ಲಿಯೂ ಪುರುಷರು ಬಯಸುವ ಸಿದ್ಧ ಮಾದರಿಗಳೇ ಎದ್ದು ಕಾಣುತ್ತವೆ’ ಎಂದರು.

‘ಸಿನಿಮಾ ರಂಗ, ರಂಗಭೂಮಿಯಲ್ಲಿ ಸಾಕಷ್ಟು ನಟಿಯರು ಅತ್ಯಾಚಾರ, ಅವಮಾನಗಳಿಗೆ ಒಳಗಾಗಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಆದರೆ ಯಾರೂ ಹೇಳಿಕೊಳ್ಳುವ ಧೈರ್ಯ ಮಾಡುತ್ತಿಲ್ಲ’ ಎಂದರು.

‘ಮಹಿಳೆಗೆ ಕಾನೂನಿನ ಪೂರ್ಣ ಬೆಂಬಲ ಸಿಗುತ್ತಿಲ್ಲ. ಸುರಕ್ಷತಾ ಘಟಕಗಳು ಕೂಡ ಕೆಲಸದ ಅವಧಿಯ ಹಿಂಸೆಗಳಿಗೆ ಮಾತ್ರ ಸ್ಪಂದಿಸುತ್ತವೆ’ ಎಂದರು.

ಹಿರಿಯ ನಟಿಯರು ಬಾಯಿ ಬಿಡುತ್ತಿಲ್ಲ: ‘ಕನ್ನಡದ ನಟಿಯೊಬ್ಬರನ್ನು ನಿರ್ದೇಶಕರೊಬ್ಬರು ಹೋಟೆಲ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡುತ್ತಾರೆ. ಆಕೆ ಅನಿವಾರ್ಯವಾಗಿ ಆ ನಿರ್ದೇಶಕನ ಜೊತೆಯೇ ಬದುಕಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅದನ್ನೆಲ್ಲಾ ಬಹಿರಂಗಪಡಿಸಲು ಈಗ ಕಾಲ ಕೂಡಿ ಬಂದಿದೆ. ಆ ಹಿರಿಯ ನಟಿ ಈಗಲಾದರೂ ನೋವನ್ನು ಹೇಳಿಕೊಳ್ಳಬೇಕು’ ಎಂದು ಲೇಖಕಿ ವಿಜಯಾ ಒತ್ತಾಯಿಸಿದರು.

‘ನಟ ಚೇತನ್‌ ಹೇಳುವಂತೆ, ಹಿರಿಯ ನಟಿಯರು ಈಗಲಾದರೂ ಮೀ–ಟೂ ಅಭಿಯಾನಕ್ಕೆ ಮುಖಾಮುಖಿಯಾಗಬೇಕು. ಶ್ರುತಿ ಹರಿಹರನ್‌ ಅವರನ್ನು ನಾವು ಬೆಂಬಲಿಸಬೇಕಿದೆ. ಇದು ಅವರೊಬ್ಬರ ಹೋರಾಟ ಅಲ್ಲ’ ಎಂದು ಹೇಳಿದರು.

‘ಸಿಲ್ಕ್‌ ಸ್ಮಿತಾ ಸೇರಿದಂತೆ ಕ್ಯಾಬರೆ ನೃತ್ಯ ಮಾಡುತ್ತಿದ್ದ ಅನೇಕ ನಟಿಯರು, ಕ್ಯಾಮೆರಾ ಮುಂದೆ ಅರೆಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕ್ಯಾಮೆರಾದಿಂದ ಸ್ವಲ್ಪ ಸರಿದುಕೊಂಡು ನಿಂತಾಗ, ಮೈ ಮೇಲೆ ಟವಲ್‌ ಹಾಕಿಕೊಳ್ಳುತ್ತಿದ್ದರು. ಇದು ಹೆಣ್ಣಿನಲ್ಲಿರುವ ಗುಣ. ಯಾರು ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ, ಕಾಮದ ದೃಷ್ಟಿಯಿಂದ ಮುಟ್ಟುತ್ತಿದ್ದಾರೆ ಎನ್ನುವ ಪರಿಜ್ಞಾನ ಆಕೆಗೆ ಇರುತ್ತದೆ’ ಎಂದರು.

‘ಸಹನಟಿಯರ ಗೋಳು ಕೇಳಲಾಗದು. ಇಂಥ ಪ್ರಕರಣ ಬಹಿರಂಗವಾದರೆ ಮುಂದೆ ಹೆಣ್ಣುಮಕ್ಕಳ ಮೈ ಮುಟ್ಟಲು ಸ್ವಲ್ಪವಾದರೂ ಹೆದರುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ಸ್ಕರ್ಟ್‌ ಮೇಲೆ ಕಣ್ಣು
‘ಕ್ರೀಡಾ ಜಗತ್ತಿನಲ್ಲಿ ಸಾಕಷ್ಟು ಮೀ– ಟೂ ಪ್ರಕರಣಗಳು ಇರಬಹುದು. ಆಟಗಾರ್ತಿಯರನ್ನು ನೋಡುವ ಕ್ಯಾಮೆರಾ ಕಣ್ಣು ಕೂಡ ಚೆಂಡಿನ ಬದಲಾಗಿ ಕೆಲವೊಮ್ಮೆ ಆಕೆಯ ಸ್ಕರ್ಟ್‌ ಮೇಲೆ ಹರಿಯುತ್ತದೆ’ ಎಂದು ಶ್ರೀಮತಿ ಹೇಳಿದರು.

‘ಮಂಚ ಹತ್ತಲು ಒಪ್ಪಿದರೆ ಮಾತ್ರ ಅವಕಾಶ’
‘ಮಂಚ, ನಟನೆ ಎರಡಕ್ಕೂ ಸೇರಿಯೇ ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ. ಮಂಚ ಹತ್ತಲು ತಯಾರಿರುವವರಿಗೆ ಮಾತ್ರ ನಟನೆಯಲ್ಲಿ ಭಾರಿ ಅವಕಾಶ ಸಿಗುತ್ತಿದೆ. ಅದರಲ್ಲೂ ಪರಭಾಷೆಯ ನಟಿಯರಾದರೆ ಇವರಿಗೆಲ್ಲಾ ಇನ್ನೂ ಸುಲಭ. ಯಾರಿಗೂ ಗೊತ್ತಾಗದಂತೆ ಐಷಾರಾಮಿ ಹೋಟೆಲ್‌ನಲ್ಲಿ ಅವರನ್ನು ಇರಿಸುವುದು, ಬೇಕೆಂದಾಗಲೆಲ್ಲ ಹೋಗುವುದು ಎಗ್ಗಿಲ್ಲದೆ ನಡೆಯುತ್ತಿದೆ’ ಎಂದು ಲೇಖಕಿ ವಿಜಯಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.