ADVERTISEMENT

ಭೂಸ್ವಾಧೀನ: ಮೆಟ್ರೊ – ಹೆದ್ದಾರಿ ಪ್ರಾಧಿಕಾರ ಗುದ್ದಾಟ

ವಿಮಾನ ನಿಲ್ದಾಣಕ್ಕೆ ಮೆಟ್ರೊ: ₹416 ಕೋಟಿಗೆ ಬೇಡಿಕೆ ಇಟ್ಟ ಎನ್‌ಎಚ್‌ಎಐ, ಅಂತಿಮ ಹಂತದ ಪ್ರಕ್ರಿಯೆ ಬಳಿಕ ಅಧಿಸೂಚನೆ

ಪ್ರವೀಣ ಕುಮಾರ್ ಪಿ.ವಿ.
Published 22 ಮೇ 2019, 19:29 IST
Last Updated 22 ಮೇ 2019, 19:29 IST
   

ಬೆಂಗಳೂರು: ವಿಮಾನನಿಲ್ದಾಣಕ್ಕೆ ಮೆಟ್ರೊ ಮಾರ್ಗ ನಿರ್ಮಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಸ್ವಾಧೀನಪಡಿಸಿಕೊಂಡಿದ್ದ ಜಾಗವನ್ನು ಬಳಸಿಕೊಳ್ಳಲಿದೆ. ಆದರೆ, ಭೂಸ್ವಾಧೀನಕ್ಕೆ ತಗುಲಿದ್ದ ವೆಚ್ಚ ಪಾವತಿ ವಿಚಾರದಲ್ಲಿ ನಿಗಮ ಹಾಗೂ ಎನ್‌ಎಚ್‌ಎಐ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಎನ್‌ಎಚ್‌ಎಐ 2010–11ರಲ್ಲಿ ವಿಮಾನನಿಲ್ದಾಣ ಸಂಪರ್ಕಕ್ಕೆ ಸಿಗ್ನಲ್‌ರಹಿತ ಕಾರಿಡಾರ್‌ ನಿರ್ಮಿಸಲು ಭೂಸ್ವಾಧೀನ ನಡೆಸಿತ್ತು. ಆಗ ಹೈಸ್ಪೀಡ್‌ ರೈಲು ಸಂಪರ್ಕಕ್ಕಾಗಿ ಹೆಬ್ಬಾಳದ ಎಸ್ಟೀಮ್‌ ಮಾಲ್‌ ಬಳಿಯಿಂದ ಟ್ರಂಪೆಟ್‌ವರೆಗೆ ಕಾರಿಡಾರ್‌ ಉದ್ದಕ್ಕೂ 5 ಮೀ. ಅಗಲದ ಜಾಗವನ್ನೂ ಸ್ವಾಧೀನಪಡಿಸಿಕೊಂಡಿತ್ತು.

ಎನ್‌ಎಚ್‌ಎಐ ವಶದಲ್ಲಿರುವ 1.05 ಲಕ್ಷ ಚದರ ಮೀಟರ್‌ ಜಾಗವನ್ನು ಎತ್ತರಿಸಿದ ರಸ್ತೆ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಿರುವ ನಿಗಮ, ಇದರ ಭೂಸ್ವಾಧೀನ ಪ್ರಕ್ರಿಯೆಗೆ ತಗುಲಿದ್ದ ವೆಚ್ಚ ₹141 ಕೋಟಿಯನ್ನು ಈಗಾಗಲೇ ಪ್ರಾಧಿಕಾರಕ್ಕೆ ಪಾವತಿಸಿದೆ. ಆದರೆ, ಭೂಸ್ವಾಧೀನಕ್ಕೆ ಮಾಡಿದ್ದ ವೆಚ್ಚಕ್ಕೆ ಬಡ್ಡಿ ಸೇರಿಸಿ ಒಟ್ಟು ₹ 416 ಕೋಟಿ ಪಾವತಿಸಬೇಕು ಎಂದು ಪ್ರಾಧಿಕಾರವು ಒತ್ತಾಯಿಸಿದೆ.

ADVERTISEMENT

‘ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡಲು ಪ್ರಾಧಿಕಾರವು ಒಪ್ಪಿದೆ. ಆದರೆ, ಆಗ ಭೂಸ್ವಾಧೀನಕ್ಕೆ ತಗುಲಿದ್ದ ವೆಚ್ಚಕ್ಕೆ ವಾರ್ಷಿಕ ಶೇ 13.8ರ ದರದಲ್ಲಿ ಬಡ್ಡಿ ಪಾವತಿಸುವಂತೆ ಕೇಳುತ್ತಿದೆ. ಇದರ ಮೊತ್ತವೇ ₹ 286 ಕೋಟಿ ಆಗುತ್ತದೆ. ಹಾಗಾಗಿ ಬಡ್ಡಿ ದರವನ್ನು ಕೈಬಿಡುವಂತೆ ನಾವು ಕೋರಿದ್ದೇವೆ. ಈ ಕುರಿತು ಪತ್ರ ವ್ಯವಹಾರ ನಡೆಯುತ್ತಿದೆ’ ಎಂದು ಬಿಎಂಆರ್‌ಸಿಎಲ್‌ನ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಚನ್ನಪ್ಪ ಗೌಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಎಂಆರ್‌ಸಿಎಲ್‌ ಈ ಹಿಂದೆ ನಾಗವಾರ ನಿಲ್ದಾಣದಿಂದ ಆರ್‌.ಕೆ.ಹೆಗಡೆ ನಗರ– ಜಕ್ಕೂರು– ಜಿಕೆವಿಕೆ ಮೂಲಕ ಟ್ರಂಪೆಟ್‌ಗೆ ಮೆಟ್ರೊ ಎತ್ತರಿಸಿದ ಮಾರ್ಗ ನಿರ್ಮಿಸಲು ಮುಂದಾಗಿತ್ತು. ಆದರೆ, ಈ ಮಾರ್ಗ ನಿರ್ಮಾಣವಾಗಬೇಕಿದ್ದ ಕಡೆ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ (ಗೇಲ್‌) ಅಳವಡಿಸಿರುವ ಸಾಂದ್ರೀಕೃತ ನೈಸರ್ಗಿಕ ಅನಿಲ ಪೂರೈಕೆ ಕೊಳವೆ ಮಾರ್ಗಗಳು ಹಾದು ಹೋಗಿದ್ದವು. ಆದ್ದರಿಂದ ಮೆಟ್ರೊ ಮಾರ್ಗದಲ್ಲಿ ಮಾರ್ಪಾಡು ಮಾಡಲಾಗಿತ್ತು.

ಹಳೆಯ ಮಾರ್ಗದ ಪ್ರಕಾರ ಮೆಟ್ರೊ ಎತ್ತರಿಸಿದ ಮಾರ್ಗವು ಜಿಕೆವಿಕೆ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರಿಕೊಳ್ಳುತ್ತಿತ್ತು. ಪರಿಷ್ಕೃತ ಮಾರ್ಗವು ಕೆ.ಆರ್‌.ಪುರ– ನಾಗವಾರ– ಹೆಬ್ಬಾಳ– ಯಲಹಂಕ– ಟ್ರಂಪೆಟ್‌ ಮೂಲಕ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.

ಹೆಬ್ಬಾಳದಿಂದ ಟ್ರಂಪೆಟ್‌ವರೆಗೆ ಸುಮಾರು 20 ಕಿ.ಮೀ ಉದ್ದಕ್ಕೆ ನಿಗಮವು ಈ ಹಿಂದೆ ಎನ್‌ಎಚ್‌ಎಐ ಸ್ವಾಧೀನ ಪಡಿಸಿಕೊಂಡಿದ್ದ ಜಾಗದಲ್ಲೇ ಮೆಟ್ರೊ ಮಾರ್ಗ ನಿರ್ಮಿಸಲಿದೆ.

‘ಕೆ.ಆರ್‌.ಪುರದಿಂದ ಹೆಬ್ಬಾಳದವರೆಗೆ ಈಗಿರುವ ಹೊರವರ್ತುಲ ರಸ್ತೆಯ (ಒಆರ್‌ಆರ್‌) ರಸ್ತೆ ವಿಭಜಕದಲ್ಲೇ ಎತ್ತರಿಸಿದ ಮಾರ್ಗದ ಕಾಂಕ್ರೀಟ್‌ ಕಂಬಗಳನ್ನು ಅಳವಡಿಸಲಾಗುತ್ತದೆ. ಹಾಗಾಗಿ ಇಲ್ಲಿ ಹೆಚ್ಚು ಭೂಸ್ವಾಧೀನ ನಡೆಸಬೇಕಾಗಿ ಬರುವುದಿಲ್ಲ. ಮೆಟ್ರೊ ನಿಲ್ದಾಣ ನಿರ್ಮಿಸುವ ಕಡೆ ಮಾತ್ರ ಭೂಸ್ವಾಧೀನ ನಡೆಸಬೇಕಾಗುತ್ತದೆ’ ಎಂದು ಚನ್ನಪ್ಪ ಗೌಡರ್‌ ತಿಳಿಸಿದರು.

‘ಹೆಬ್ಬಾಳದಿಂದ ಟ್ರಂಪೆಟ್‌ವರೆಗೂ ಮೆಟ್ರೊ ನಿಲ್ದಾಣ ನಿರ್ಮಿಸುವ ಕಡೆ ಹೆಚ್ಚುವರಿಯಾಗಿ ಭೂಸ್ವಾಧೀನ ನಡೆಸಬೇಕಾದ ಅಗತ್ಯವಿದೆ. ಪ್ರತಿಯೊಂದು ನಿಲ್ದಾಣ ಕನಿಷ್ಠ 1,800 ಚ.ಮೀ ವಿಸ್ತೀರ್ಣವನ್ನು ಹೊಂದಿರುತ್ತದೆ. ಅದರ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲೂ ತಲಾ 30x30 ಮೀ ಜಾಗವನ್ನು ಪ್ರವೇಶ ದ್ವಾರ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕು’ ಎಂದು ಅವರು ವಿವರಿಸಿದರು.

‘ಕೆ.ಆರ್‌.ಪುರದಿಂದ ಅಂತರರಾಷ್ಟ್ರೀಯ ವಿಮಾನನಿಲ್ದಾಣದವರೆಗೆ, ಎನ್‌ಎಚ್‌ಎಐ ಜಾಗವೂ ಸೇರಿ ಮೆಟ್ರೊ ಮಾರ್ಗಕ್ಕೆ ಹಾಗೂ ನಿಲ್ದಾಣಗಳಿಗೆ ಒಟ್ಟು 3.13 ಲಕ್ಷ ಚ.ಮೀ ಜಾಗದ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಅಂದಾಜಿಸಿದ್ದೇವೆ. ಒಟ್ಟು ಎಷ್ಟು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಲೆಕ್ಕ ಹಾಕುತ್ತಿದ್ದೇವೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದಾದ ತಕ್ಷಣವೇ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಿದ್ದೇವೆ’ ಎಂದು ತಿಳಿಸಿದರು.

ಈ ಮಾರ್ಗವನ್ನು 2023ರ ಒಳಗೆ ಪೂರ್ಣಗೊಳಿಸುವ ಗುರಿಯನ್ನು ನಿಗಮವು ಹೊಂದಿದೆ.

ಟ್ರಂಪೆಟ್‌ ಬಳಿ ಡಿಪೊ

‘ವಿಮಾನನಿಲ್ದಾಣದ ಸಮೀಪದ ಟ್ರಂಪೆಟ್‌ ಬಳಿ ಮೆಟ್ರೊ ಡಿಪೊ ನಿರ್ಮಿಸುವ ಪ್ರಸ್ತಾವವನ್ನು ಬಿಎಂಆರ್‌ಸಿಎಲ್‌ ಹೊಂದಿದೆ. ಡಿಪೊಗಾಗಿ 92 ಸಾವಿರ ಚದರ ಮೀಟರ್‌ ಜಾಗದ ಅಗತ್ಯವಿದೆ’ ಎಂದು ಚನ್ನಪ್ಪ ಗೌಡರ್‌ ಮಾಹಿತಿ ನೀಡಿದರು.

17 ಕಡೆ ಮೆಟ್ರೊ ನಿಲ್ದಾಣ

ಕೆ.ಆರ್‌.ಪುರ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನನಿಲ್ದಾಣದವರೆಗೆ ಒಟ್ಟು 17 ಕಡೆ ಮೆಟ್ರೊ ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾಪವಿದೆ. ಕೆ.ಆರ್‌.ಪುರದಿಂದ ಹೆಬ್ಬಾಳವರೆಗೆ 10 ನಿಲ್ದಾಣಗಳು ನಿರ್ಮಾಣವಾಗಲಿದ್ದು, ಇಲ್ಲಿ ಪ್ರತಿ ಎರಡು ನಿಲ್ದಾಣಗಳ ನಡುವೆ ಸರಾಸರಿ 1.4 ಕಿ.ಮೀ ಅಂತರ ಇರಲಿದೆ. ಹೆಬ್ಬಾಳದ ಬಳಿಯ ಕೋಗಿಲು ಕ್ರಾಸ್‌ನಿಂದ ಟ್ರಂಪೆಟ್‌ವರೆಗೆ ಏಳು ನಿಲ್ದಾಣಗಳು ನಿರ್ಮಾಣವಾಗಲಿದ್ದು, ಇಲ್ಲಿ ಎರಡು ನಿಲ್ದಾಣಗಳ ನಡುವೆ ಸರಾಸರಿ 4 ಕಿ.ಮೀ ಅಂತರ ಇರಲಿದೆ.

ಪ್ರತಿ ನಿಲ್ದಾಣದ ಬಳಿಯೂ ಬಸ್‌ಬೇ

‘ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ಮಾರ್ಗದಲ್ಲಿ ಎಲ್ಲ ನಿಲ್ದಾಣಗಳ ಬಳಿಯೂ ನಿಗಮವು ಬಸ್‌ ಬೇಗಳನ್ನು ನಿರ್ಮಿಸಲಿದೆ. ಈ ಸಲುವಾಗಿ ಪ್ರತಿ ನಿಲ್ದಾಣದ ಇಕ್ಕೆಲಗಳಲ್ಲೂ ತಲಾ 300 ಚ.ಮೀ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ’ ಎಂದು ಚನ್ನಪ್ಪ ಗೌಡರ್‌ ಮಾಹಿತಿ ನೀಡಿದರು.

***

* 1.05 ಲಕ್ಷ ಚ.ಮೀ - ಹೆಬ್ಬಾಳದಿಂದ ಟ್ರಂಪೆಟ್‌ವರೆಗೆ ಮೆಟ್ರೊ ಮಾರ್ಗಕ್ಕೆ ಬೇಕಾಗುದ ಎನ್‌ಎಚ್‌ಎಐ ಜಾಗ

* ₹ 141 ಕೋಟಿ - ಎನ್‌ಎಚ್‌ಎಐ ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ತಗಲಿದ್ದ ಮೊತ್ತ

* ₹ 286 ಕೋಟಿ - ಭೂಸ್ವಾಧೀನ ಮೊತ್ತಕ್ಕೆ ಬಿಎಂಆರ್‌ಸಿಎಲ್‌ ಪಾವತಿಸಬೇಕಾದ ಬಡ್ಡಿ

* 3.13 ಲಕ್ಷ ಚ.ಮೀ - ಕೆ.ಆರ್.ಪುರ–ವಿಮಾನನಿಲ್ದಾಣದವರೆಗೆ ಬಿಎಂಆರ್‌ಸಿಎಲ್‌ ಸ್ವಾಧೀನಪಡಿಸಿಕೊಳ್ಳಬೇಕಾದ ಒಟ್ಟು ಜಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.