ADVERTISEMENT

ಬೈಕ್‌ ಸವಾರನ ಮೇಲೆ ಬಿದ್ದ ಬ್ಯಾರಿಕೇಡ್‌

ಸುರಕ್ಷತಾ ಕ್ರಮ ಕೈಗೊಳ್ಳದ ‘ನಮ್ಮ ಮೆಟ್ರೊ’: ಆರೋಪ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:36 IST
Last Updated 16 ಆಗಸ್ಟ್ 2019, 19:36 IST
ಆರ್‌.ವಿ. ರಸ್ತೆ ನಿಲ್ದಾಣದ ಬಳಿ ರಸ್ತೆಯ ಮೇಲೆ ಬಿದ್ದಿರುವ ಬ್ಯಾರಿಕೇಡ್‌
ಆರ್‌.ವಿ. ರಸ್ತೆ ನಿಲ್ದಾಣದ ಬಳಿ ರಸ್ತೆಯ ಮೇಲೆ ಬಿದ್ದಿರುವ ಬ್ಯಾರಿಕೇಡ್‌   

ಬೆಂಗಳೂರು:ನಗರದ ವಿವಿಧೆಡೆ ‘ನಮ್ಮ ಮೆಟ್ರೊ’ ಕಾಮಗಾರಿ ನಡೆಯುತ್ತಿದೆ. ಆದರೆ, ಈ ವೇಳೆ ಬಿಎಂಆರ್‌ಸಿಎಲ್‌ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಆರ್.ವಿ. ನಿಲ್ದಾಣದ ಬಳಿ ಗುರುವಾರ ಮಧ್ಯಾಹ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಚಿನ್‌ ಎಂಬುವರ ಮೇಲೆ ‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ನಿಲ್ಲಿಸಿದ್ದ ಬ್ಯಾರಿಕೇಡ್‌ ಬಿದ್ದಿದೆ. ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಸಚಿನ್‌ ಹೇಳುತ್ತಾರೆ.

‘ಬನಶಂಕರಿಯಿಂದ 30–35 ಕಿ.ಮೀ. ವೇಗದಲ್ಲಿ ನಾನು ಬೈಕ್‌ನಲ್ಲಿ ಹೋಗುತ್ತಿದ್ದೆ. ಆರ್‌.ವಿ. ನಿಲ್ದಾಣದ ಬಳಿ ಬ್ಯಾರಿಕೇಡ್‌ ನನ್ನ ಮೇಲೆ ಬಿದ್ದಿತು. ಹೆಲ್ಮೆಟ್‌ ಒಡೆದು ಹೋಯಿತು. ಮುಖ, ಕೈ,ಕಾಲಿಗೆ ಗಾಯವಾಗಿದೆ. ಹೆಲ್ಮೆಟ್‌ ಹಾಕಿರದಿದ್ದರೆ ಪ್ರಾಣಕ್ಕೇ ಅಪಾಯವಿತ್ತು’ ಎಂದು ಅವರು ತಿಳಿಸಿದರು.

ADVERTISEMENT

‘ಬ್ಯಾರಿಕೇಡ್‌ಗಳು ಏಳು–ಎಂಟು ಜನ ಎತ್ತಬೇಕಾದಷ್ಟು ಭಾರವಿರುತ್ತವೆ. ರಸ್ತೆಯ ಬದಿ ಇವುಗಳನ್ನು ಸಾಲಾಗಿ ನಿಲ್ಲಿಸಿದಾಗ ಕಬ್ಬಿಣದ ಸರಳುಗಳನ್ನು ಹಾಕಿ ವೆಲ್ಡ್‌ ಮಾಡಿರಬೇಕಾಗುತ್ತದೆ. ನಾನು ಸಿವಿಲ್‌ ಎಂಜಿನಿಯರ್‌ ಆಗಿರುವುದರಿಂದ ಈ ಬಗ್ಗೆ ಮಾಹಿತಿ ಇದೆ’ ಎಂದರು.

‘ಆರ್.ವಿ. ನಿಲ್ದಾಣದ ಬಳಿ ಸಾಲಾಗಿ ನಿಲ್ಲಿಸಿರುವ ಬ್ಯಾರಿಕೇಡ್‌ಗಳಿಗೆ ವೆಲ್ಡ್‌ ಮಾಡಿಲ್ಲ. ಹಿಂದೆ ಸಣ್ಣ ಕಲ್ಲುಗಳನ್ನು ಮಾತ್ರ ಇಟ್ಟಿದ್ದಾರೆ. ಜೋರಾಗಿ ಗಾಳಿ ಬಂದರೆ ಬೀಳುವ ಸ್ಥಿತಿಯಲ್ಲಿ ಇವೆ’ ಎಂದು ಸಚಿನ್‌ ಹೇಳಿದರು.

ಬ್ಯಾರಿಕೇಡ್‌ ಬೀಳಲು ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯವೇ ಕಾರಣ ಎಂದು ಜಯನಗರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.