ADVERTISEMENT

ವಿಧಾನಸೌಧ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಗಲಾಟೆ: ನೇಪಾಳದ 11 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 14:11 IST
Last Updated 21 ನವೆಂಬರ್ 2025, 14:11 IST
   

ಬೆಂಗಳೂರು: ವಿಧಾನಸೌಧ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಎರಡು ಗುಂಪುಗಳ ಯುವಕರ ಮಧ್ಯೆ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ನೇಪಾಳದ 11 ಯುವಕರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ಉಪೇಂದ್ರ ಚುಲ್‌ಗೈ, ಗೋಪಾಲ್‌, ಮನೋಜ್‌ ಶಾಹಿ, ಚಾವಿ ಖಾತ್ರಿ, ಸುದೀಪ್‌, ದಿನೇಶ್‌ ಕನ್ವಾರ್, ಧರ್ಮೇಂದ್ರ , ರಾಹುಲ್‌ ಸಿಂಗ್‌, ನಿರ್ಮಲ್‌, ಮನೋಜ್‌ ಕತಾಯತ್ತ್‌, ಪರ್ಶ್‌ ಬೋರಾ ಬಂಧಿತ ಆರೋಪಿಗಳು.

ಆರೋಪಿಗಳು ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರು. ಹತ್ತು ದಿನಗಳ ಹಿಂದೆ ವಿಧಾನಸೌಧದ ಬಳಿಗೆ ಬಂದಿದ್ದಾಗ ಎರಡು ಗುಂಪುಗಳ ಮಧ್ಯೆ ಗಲಾಟೆ ಆಗಿತ್ತು. ಗಲಾಟೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ದೃಶ್ಯ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಕರಣದ ತನಿಖೆಗೆ ಕೇಂದ್ರ ವಿಭಾಗದ ಎಸಿಪಿ ನೇತೃತ್ವದಲ್ಲಿ ಕಬ್ಬನ್‌ಪಾರ್ಕ್‌, ವಿಧಾನಸೌಧ ಠಾಣೆಯ ಸಿಬ್ಬಂದಿಯ ನೇತೃತ್ವದಲ್ಲಿ ಐದು ವಿಶೇಷ ತಂಡ ರಚಿಸಲಾಗಿತ್ತು.

‘ಒಂದು ಗುಂಪಿನ ಯುವಕರಿಗೆ ರೀಲ್ಸ್‌ ಮಾಡುವ ಅಭ್ಯಾಸವಿತ್ತು. ಕಬ್ಬನ್‌ಪಾರ್ಕ್ ಹಾಗೂ ವಿಧಾನಸೌಧ– ಹೈಕೋರ್ಟ್‌ ಎದುರು ಬಂದು ರೀಲ್ಸ್ ಮಾಡುತ್ತಿದ್ದರು. ಈ ತಂಡ ಮಾಡುತ್ತಿದ್ದ ರೀಲ್ಸ್‌ಗಳಿಗೆ ನೇಪಾಳದಲ್ಲಿ ಹೆಚ್ಚು ಫಾಲೊವರ್ಸ್‌ಗಳು ಇದ್ದರು. ಮೊಬೈಲ್‌ ವಿಚಾರಕ್ಕೆ ಕೆಲವು ದಿನಗಳ ಹಿಂದೆ ಮತ್ತೊಂದು ತಂಡದ ಯುವಕರ ಗುಂಪಿನ ಮಧ್ಯೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ವಿಧಾನಸೌಧದ ಎದುರು ಎರಡು ತಂಡಗಳು ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ ಕಬ್ಬನ್‌ಪಾರ್ಕ್‌ನಲ್ಲೂ ಯುವತಿಯ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.