ಬೆಂಗಳೂರು: ರಜಾದಿನ ಎಂದು ಪರಿಗಣಿಸಿ ಸೋಮವಾರ ಬೆಳಿಗ್ಗೆ ದಟ್ಟಣೆ ಅವಧಿಯಲ್ಲಿ 10 ನಿಮಿಷಕ್ಕೊಂದು ರೈಲು ಓಡಿಸಿದ್ದರಿಂದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಭಾರಿ ಜನಸಂದಣಿ ಉಂಟಾಯಿತು. ಅದರ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಸಂಸದ ಪಿ.ಸಿ. ಮೋಹನ್ ಅವರು ಬಿಎಂಆರ್‌ಸಿಎಲ್‌ನ ಕ್ರಮವನ್ನು ಟೀಕಿಸಿದ್ದಾರೆ.
ಬಳಿಕ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್ ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಿತು.
‘ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಅಸಮರ್ಪಕ ನಿರ್ವಹಣೆಯನ್ನು ಒಪ್ಪಲಾಗದು. ಸೌರಮಾನ ಯುಗಾದಿಗೆ ಎಲ್ಲರಿಗೂ ರಜೆ ಇದೆ ಎಂದು ಭಾವಿಸಿ ರೈಲು ಟ್ರಿಪ್‌ಗಳ ನಡುವಿನ ಅವಧಿಯನ್ನು 10 ನಿಮಿಷಕ್ಕೆ ಏರಿಸಿದ್ದು, ಅವ್ಯವಸ್ಥೆ ಸೃಷ್ಟಿಸಿದೆ' ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದರು.
‘ಬಿಎಂಆರ್‌ಸಿಎಲ್, ಇಂತಹ ಸಂದರ್ಭಗಳಲ್ಲಿ ಉತ್ತಮ ಯೋಜನೆಗಳನ್ನು ಮಾಡಿಕೊಳ್ಳಬೇಕು' ಎಂದು ಸಲಹೆ ನೀಡಿದ್ದರು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದಟ್ಟಣೆಯ ಅವಧಿಯಲ್ಲಿ ಮೆಜೆಸ್ಟಿಕ್‌ನಿಂದ ಐದು ನಿಮಿಷಕ್ಕೊಂದು ರೈಲು ಇರುತ್ತಿತ್ತು.
ಬಿಎಂಆರ್‌ಸಿಎಲ್ ಸ್ಪಷ್ಟನೆ: ಸಾರ್ವತ್ರಿಕ ರಜೆ ಇದ್ದರೂ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಬೈಯಪ್ಪಹನಹಳ್ಳಿ–ಮೆಜೆಸ್ಟಿಕ್ ನಡುವೆ ನಾಲ್ಕು ಹೆಚ್ಚುವರಿ ರೈಲುಗಳನ್ನು ಓಡಿಸಿದೆ. ಕೆಲವು ರೈಲುಗಳನ್ನು ಐಟಿಪಿಎಲ್‌ಗೆ ಹಿಂತಿರುಗಿಸಲಾಗಿದೆ. ಮೆಜೆಸ್ಟಿಕ್, ಗರುಡಾಚಾರ್‌ಪಾಳ್ಯ ಮತ್ತು ವೈಟ್‌ಫೀಲ್ಡ್‌ನಿಂದ ಒಟ್ಟು 7 ಹೊಸ ಟ್ರಿಪ್‌ಗಳನ್ನು ನಡೆಸಲಾಗಿದೆ. ಅಲ್ಲದೆ, ಸಂಜೆ ಐಟಿಪಿಎಲ್‌ನಿಂದ ರೈಲುಗಳು ಎಂದಿನಂತೆ 5 ನಿಮಿಷಗಳ ಅಂತರದಲ್ಲಿ ಸಂಚರಿಸಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.