ಬೆಂಗಳೂರು: ನಗರದಲ್ಲಿ ಶುಕ್ರವಾರ ಪ್ರಯಾಣಿಕರಿಗೆ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೊ ರೈಲು ಸೇವೆ ಲಭ್ಯವಾಯಿತು. 173 ದಿನಗಳ ನಂತರ ಸತತ 14 ತಾಸು ರೈಲುಗಳು ಸಂಚರಿಸಿದವು.29,114 ಪ್ರಯಾಣಿಕರು ಸಂಚರಿಸಿದರು. ಮೊದಲ ನಾಲ್ಕು ದಿನಗಳಿಗೆ ಹೋಲಿಸಿದರೆ, ಪ್ರಯಾಣಿಕರ ಸಂಖ್ಯೆ ತುಂಬಾ ಹೆಚ್ಚಾಗಿತ್ತು.
ಸೆ.7ರಿಂದಲೇ ಮೆಟ್ರೊ ರೈಲು ಸೇವೆ ಆರಂಭವಾಗಿದ್ದರೂ ದಿನಕ್ಕೆ 6 ತಾಸು ಮಾತ್ರ ಸೇವೆ ನೀಡಲಾಗುತ್ತಿತ್ತು. ಶುಕ್ರವಾರ ಈ ಅವಧಿ ಹೆಚ್ಚಳವಾಗಿದ್ದರಿಂದಲೂ ಪ್ರಯಾಣಿಕರ ಸಂಖ್ಯೆ ಏರಲು ಕಾರಣವಾಗಿದೆ. ಒಬ್ಬ ಪ್ರಯಾಣಿಕ ಎರಡು–ಮೂರು ಬಾರಿ ಸಂಚರಿಸಿರುವುದೂ ಸೇರಿದಂತೆ ಈ ಸಂಖ್ಯೆ 29 ಸಾವಿರ ತಲುಪಿದೆ. ನೇರಳೆ ಮಾರ್ಗದಲ್ಲಿ ದಿನಕ್ಕೆ 6 ತಾಸು ರೈಲುಗಳ ಸಂಚಾರಕ್ಕೆ ಅವಕಾಶವಿದ್ದಾಗ ಮೊದಲ ದಿನ 3,770 ಜನ ಸಂಚರಿಸಿದ್ದರು. ಹಸಿರು ಮಾರ್ಗದಲ್ಲಿಯೂ ಸೀಮಿತ ಅವಧಿ ಯವರೆಗೆ ರೈಲುಗಳು ಸಂಚರಿಸಿದ್ದಾಗ, ಎರಡೂ ಮಾರ್ಗಗಳಲ್ಲಿ 6,500 ಜನಪ್ರಯಾಣಿಸಿದ್ದರು.
‘ಪ್ರಯಾಣಿಕರ ಸಂಖ್ಯೆ ಕ್ರಮೇಣವಾಗಿ ಏರುತ್ತಿದೆ. ಮೊದಲ ನಾಲ್ಕು ದಿನಗಳಿಗೆ ಹೋಲಿಸಿದರೆ, ಗುರುವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕ್ರಮೇಣ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.