ADVERTISEMENT

ಮೆಟ್ರೊ ಕಾಮಗಾರಿ; ತಲೆಯೊಳಗೆ ತಂತಿ ಹೊಕ್ಕು ಕಾರ್ಮಿಕ ಸಾವು

Metro Job Labour Death

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 15:40 IST
Last Updated 19 ಡಿಸೆಂಬರ್ 2020, 15:40 IST
ಮೆಟ್ರೊ ಕಾಮಗಾರಿ (ಸಾಂದರ್ಭಿಕ ಚಿತ್ರ)
ಮೆಟ್ರೊ ಕಾಮಗಾರಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಮೆಟ್ರೊ ಕಾಮಗಾರಿ ವೇಳೆ ಕಬ್ಬಿಣದ ತಂತಿಯೊಂದು ತಲೆಗೆ ಹೊಕ್ಕು ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕ ಸಂತೋಷ್ ಹನಸದ್ ಎಂಬುವರು ಮತಪಟ್ಟಿದ್ದು, ತಿಲಕ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೃತ ಸಂತೋಷ್, ಜಾರ್ಖಂಡ್‌ನವರು. ಅವರ ಸಾವಿನ ಬಗ್ಗೆ ಸಹೋದರ ದೂರು ನೀಡಿದ್ದಾರೆ. ಯುಟ್ರಾಕಾನ್ ಕಂಪನಿ ಎಂಜಿನಿಯರ್ ನವನೀತ್ ಕೃಷ್ಣನ್, ಕಂಪನಿ ಪ್ರತಿನಿಧಿ ಸುರೇಶ್, ನೌಕರರಾದ ವೀರಮಣಿ, ಜೀವನ್ ಮರಂಡಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲಸ ಅರಸಿ ಕುಟುಂಬ ಸಮೇತ ಸಂತೋಷ್, ನಗರಕ್ಕೆ ಬಂದಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಯುಟ್ರಾಕಾನ್ ಕಂಪನಿಯಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿದ್ದರು. ಡಿ. 15ರ ರಾತ್ರಿಯಿಂದ ಜಯನಗರ 9ನೇ ಹಂತದ ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಸಂತೋಷ್ ಹಾಗೂ ಇತರರು ಕೆಲಸ ಮಾಡುತ್ತಿದ್ದರು.’

ADVERTISEMENT

’ಡಿ. 16ರಂದು ನಸುಕಿನಲ್ಲಿ 16 ಎಂ.ಎಂ. ತಂತಿಯನ್ನು ಅಳವಡಿಸಲಾಗುತ್ತಿತ್ತು. ಅದೇ ಸಂದರ್ಭದಲ್ಲೇ ತಂತಿಯೊಂದು ಸಂತೋಷ್ ತಲೆಯ ಎಡ ಭಾಗಕ್ಕೆ ಹೊಕ್ಕು ಬಲಭಾಗದವರೆಗೂ ಬಂದಿತ್ತು. ತಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸೋರುತ್ತಿತ್ತು. ಸ್ಥಳದಲ್ಲಿದ್ದ ಕಾರ್ಮಿಕರೇ, ಸಂತೋಷ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಕಂಪನಿ ಹಾಗೂ ಇತರರ ನಿರ್ಲಕ್ಷ್ಯವೇ ಸಂತೋಷ್ ಅವರ ಸಾವಿಗೆ ಕಾರಣವೆಂದು ಸಂತೋಷ್‌ ಸಹೋದರ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.