ADVERTISEMENT

ಟ್ರಿನಿಟಿ: ಮೆಟ್ರೊ ಮಾರ್ಗದ ದುರಸ್ತಿ ಆರಂಭ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:40 IST
Last Updated 28 ಡಿಸೆಂಬರ್ 2018, 19:40 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಟ್ರಿನಿಟಿ ನಿಲ್ದಾಣದ ಬಳಿ ಹಳಿಯನ್ನು ದುರಸ್ತಿಪಡಿಸುವ ಕಾರ್ಯ ಶುಕ್ರವಾರ ರಾತ್ರಿ ಆರಂಭವಾಯಿತು. ಹಾಗಾಗಿ ರಾತ್ರಿ 8ರ ಬಳಿಕ ಎಂ.ಜಿ.ರಸ್ತೆ ಹಾಗೂ ಇಂದಿರಾನಗರ ಮೆಟ್ರೊ ನಿಲ್ದಾಣಗಳ ಮಧ್ಯೆ ಮೆಟ್ರೊ ಸಂಚಾರ ಸ್ಥಗಿತಗೊಳಿಸಲಾಯಿತು.

ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ಸಂಖ್ಯೆ 155ರ ವಯಡಕ್ಟ್‌ ಬಳಿ ಕಾಂಕ್ರೀಟ್‌ ರಚನೆಯಲ್ಲಿ ಡಿಸೆಂಬರ್‌ 13ರಂದು ಸಮಸ್ಯೆ ಕಾಣಿಸಿಕೊಂಡಿತ್ತು.

ಎಂ.ಜಿ.ರಸ್ತೆ– ಇಂದಿರಾನಗರ ನಡುವೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ವೇಳೆ ಇಡೀ ಮಾರ್ಗದಲ್ಲೂ ವಿದ್ಯುತ್‌ ಪೂರೈಕೆ ವ್ಯತ್ಯಯಗೊಂಡಿತು. ಹಾಗಾಗಿ ರಾತ್ರಿ 8 ಗಂಟೆ ಸುಮಾರಿಗೆ ಕೆಲವು ರೈಲುಗಳು ನಿಲ್ದಾಣದಲ್ಲೇ 15 ನಿಮಿಷ ನಿಂತವು.

ADVERTISEMENT

‘ನಾವಿದ್ದ ರೈಲು ಮೆಜೆಸ್ಟಿಕ್‌ ನಿಲ್ದಾಣದಲ್ಲಿನ 15 ನಿಮಿಷ ನಿಂತಿತು. ಮತ್ತೆ ಕಬ್ಬನ್‌ ಉದ್ಯಾನದಲ್ಲಿ 10 ನಿಮಿಷ ನಿಂತಿತು. ಹಾಗಾಗಿ ನಾವು 25 ನಿಮಿಷ ತಡವಾಗಿ ಎಂ.ಜಿ.ರಸ್ತೆಯನ್ನು ತಲುಪಿದೆವು’ ಎಂದು ಪ್ರಯಾಣಿಕ ಸಂತೋಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಬ್ಬನ್ ಉದ್ಯಾನದಲ್ಲಿ ನಿಂತ ರೈಲು 5 ನಿಮಿಷವಾದರೂ ಹೊರಡಲೇ ಇಲ್ಲ. ವಿದ್ಯುತ್‌ ಪೂರೈಕೆ ವ್ಯತ್ಯಯವಾಗಿದೆ. ರೈಲು ಪ್ರಯಾಣ ಆರಂಭಿಸುವಾಗ ವಿಳಂಬವಾಗಬಹುದು ಎಂದು ಸಿಬ್ಬಂದಿ ತಿಳಿಸಿದರು. ಹಾಗಾಗಿ ನಾವು ಅಲ್ಲಿ ಮೆಟ್ರೊದಿಂದ ಇಳಿದು ಬಸ್‌ ಮೂಲಕ ಎಂ.ಜಿ.ರಸ್ತೆ ತಲು‍ಪಿದೆವು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಕಬ್ಬನ್‌ ಉದ್ಯಾನ ನಿಲ್ದಾಣ ಹಾಗೂ ಎಂ.ಜಿ.ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಹೋಗುವ ಪ್ರಯಾಣಿಕರಿಗೆ ಹಾಗೂ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ ಪ್ರಯಾಣಿಸುವವರಿಗೆ ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿತ್ತು.

‘ಟ್ರಿನಿಟಿ ಬಳಿಯ ಮೆಟ್ರೊ ಮರ್ಗವನ್ನು ದುರಸ್ತಿ ಕಾರ್ಯ ಶುಕ್ರವಾರ ರಾತ್ರಿಯಿಂದಲೇ ಆರಂಭವಾಗಿದೆ. ಇದನ್ನು ಪೂರ್ಣಗೊಳಿಸಲು ಎರಡು ದಿನ ಬೇಕು. ಹಾಗಾಗಿ ಎಂ.ಜಿ.ರಸ್ತೆ– ಇಂದಿರಾನಗರ ನಡುವೆ ಇದೇ 30ರವರೆಗೆ ಮೆಟ್ರೊ ಸೇವೆ ಇರುವುದಿಲ್ಲ. ಉಳಿದ ಕಡೆ ಮೆಟ್ರೊ ಸೇವೆ ಎಂದಿನಂತೆ ಮುಂದುವರಿಯಲಿದೆ. ಇದೇ 31ರಿಂದ ನೇರಳೆ ಮಾರ್ಗದಲ್ಲಿ ಮೆಟ್ರೊ ಸಂಚಾರ ಯಥಾಸ್ಥಿತಿಗೆ ಮರಳಲಿದೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.