ADVERTISEMENT

ಐಟಿಪಿಬಿ ಸ್ಕೈವಾಕ್‌ಗೆ ಚಾಲನೆ: 55 ಸಾವಿರ ಟೆಕಿಗಳಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 1:32 IST
Last Updated 17 ಜನವರಿ 2026, 1:32 IST
ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ (ಐಟಿಪಿಬಿ) ಮತ್ತು ಪಾರ್ಕ್ ಸ್ಕ್ವೇರ್ ಮಾಲ್‌ಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ
ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ (ಐಟಿಪಿಬಿ) ಮತ್ತು ಪಾರ್ಕ್ ಸ್ಕ್ವೇರ್ ಮಾಲ್‌ಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ   

ಬೆಂಗಳೂರು: ಪಟ್ಟಂದೂರು ಅಗ್ರಹಾರದಲ್ಲಿ ನಮ್ಮ ಮೆಟ್ರೊ ನಿಲ್ದಾಣದಿಂದ ನೇರವಾಗಿ ಐಟಿಪಿಬಿ ಕಚೇರಿಗೆ ತಲುಪುವ ಪಾದಚಾರಿ ಮೇಲ್ಸೇತುವೆಗೆ (ಸ್ಕೈವಾಕ್‌) ಶುಕ್ರವಾರ ಚಾಲನೆ ನೀಡಲಾಗಿದೆ. ಇದರಿಂದಾಗಿ ಐಟಿ ಹಬ್‌ ಆಗಿರುವ ವೈಟ್‌ಫೀಲ್ಡ್‌ ಸುತ್ತಮುತ್ತ ಟೆಕಿಗಳು ವಾಹನ ಸಂದಣಿಯ ನಡುವೆ ಸಿಲುಕುವುದು ತಪ್ಪಿದ್ದು 55 ಸಾವಿರಕ್ಕೂ ಅಧಿಕ ಮಂದಿಗೆ ಪ್ರಯೋಜನವಾಗಲಿದೆ.

ಪಕ್ಕದಲ್ಲೇ ಕಚೇರಿ ಇದ್ದರೂ ವಿಪರೀತ ವಾಹನ ದಟ್ಟಣೆಯ ನಡುವೆ ರಸ್ತೆ ದಾಟಲು, ವಾಹನಗಳಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿತ್ಯ ಇರುತ್ತಿತ್ತು. ಟ್ರಾಫಿಕ್‌ ಸಿಗ್ನಲ್‌ ಬಿದ್ದಾಗ ಕಿಲೋಮೀಟರ್‌ ಗಟ್ಟಲೆ ವಾಹನಗಳು ನಿಲ್ಲುವಂತಾಗಿತ್ತು. ಈ ಸಮಸ್ಯೆಗೆ ಈಗ ಸ್ಕೈವಾಕ್ ಮುಕ್ತಿ ನೀಡಿದೆ.

ನಮ್ಮ ಮೆಟ್ರೊ ನೇರಳೆ ಮಾರ್ಗದ ಪಟ್ಟಂದೂರು ಅಗ್ರಹಾರ ಮೆಟ್ರೊ ನಿಲ್ದಾಣದಿಂದ ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ (ಐಟಿಪಿಬಿ) ಮತ್ತು ಪಾರ್ಕ್ ಸ್ಕ್ವೇರ್ ಮಾಲ್‌ಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು 2023ರ ಜನವರಿ 17 ರಂದು ಬಿಎಂಆರ್‌ಸಿಎಲ್ ಮತ್ತು ಐಟಿಪಿಎಲ್ ನಡುವೆ ಒಪ್ಪಂದ ಆಗಿತ್ತು.

ADVERTISEMENT

ಕ್ಯಾಪಿಟಲ್ಯಾಂಡ್ ಇಂಡಿಯಾ ಟ್ರಸ್ಟ್‌ನ ಸಿಇಒ ಗೌರಿಶಂಕರ್ ನಾಗಭೂಷಣಂ ಮತ್ತು ಬಿಎಂಆರ್‌ಸಿಎಲ್‌ ಪ್ರಾಜೆಕ್ಟ್ ಮತ್ತು ಪ್ಲಾನಿಂಗ್‌ ವಿಭಾಗದ ನಿರ್ದೇಶಕ ಸುಬ್ರಹ್ಮಣ್ಯ ಗುಡ್ಗೆ ಅವರು ಶುಕ್ರವಾರ ಸ್ಕೈವಾಕ್‌ ಉದ್ಘಾಟಿಸಿದರು.

ಗೌರಿಶಂಕರ ನಾಗಭೂಷಣಂ ಮಾತನಾಡಿ, ‘ನಿತ್ಯ ಮೆಟ್ರೊ ಮೂಲಕ ಕಚೇರಿಗೆ ಬರುವ ಸಾವಿರಾರು ತಂತ್ರಜ್ಞರಿಗೆ ಇದರಿಂದ ಅನುಕೂಲವಾಗಲಿದೆ. ನಿಲ್ದಾಣದಿಂದ ನೇರವಾಗಿ ಬಿಸಿನೆಸ್ ಪಾರ್ಕ್ ಮತ್ತು ಮಾಲ್‌ಗೆ ತೆರಳಬಹುದಾದ್ದರಿಂದ ಸುರಕ್ಷತೆಯ ಜೊತೆಗೆ ಸಮಯದ ಉಳಿತಾಯವೂ ಆಗಲಿದೆ. ಪ್ರಯಾಣಿಕರು, ವಾಹನ ಸವಾರರಿಗೆ ಮಾತ್ರವಲ್ಲದೇ ವೈಟ್‌ಫೀಲ್ಡ್ ಪ್ರದೇಶದ ನಿವಾಸಿಗಳಿಗೂ ಸುರಕ್ಷತೆ ಕಲ್ಪಿಸಲಿದೆ’ ಎಂದು ಹೇಳಿದರು.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಜೆ. ಮಾತನಾಡಿ, ‘ಕೊನೆಯ ಹಂತದ ಸಂಪರ್ಕವನ್ನು ಬಲಪಡಿಸಲು ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆ ಸಹಕಾರಿಯಾಗಬಲ್ಲದು ಎನ್ನುವುದಕ್ಕೆ ಐಟಿಪಿಬಿ ಮೆಟ್ರೊ ಪಾದಚಾರಿ ಮೇಲ್ಸೇತುವೆ ಉತ್ತಮ ಉದಾಹರಣೆ. ಪ್ರಮುಖ ಮೆಟ್ರೊ ನಿಲ್ದಾಣಗಳಿಗೆ ಸುಗಮವಾದ ಪಾದಚಾರಿ ಮಾರ್ಗದ ನಿರ್ಮಾಣ ಮಾಡುವುದರಿಂದ ಪೂರಕವಾದ ವಹಿವಾಟು ವಲಯಗಳಿಗೆ ಅನುಕೂಲವಾಗುತ್ತದೆ. ಮೆಟ್ರೊ ಸಾರಿಗೆ ಸುಧಾರಣೆಯಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಲು ಸಾರ್ವಜನಿಕರಿಗೆ ಪ್ರೇರಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಅಪ್ಲೈಡ್ ಮೆಟೀರಿಯಲ್ಸ್, ಲೈಟ್ ಆ್ಯಂಡ್‌ ವಂಡರ್, ಎಟಿ ಆ್ಯಂಡ್‌ ಟಿ, ಸೇಬರ್, ಕ್ಯಾಪಿಟಲ್ ಒನ್, ಮ್ಯೂ ಸಿಗ್ಮಾ, ಕಂಡೂಯೇಟ್ ಇಂಡಿಯಾ, ಎಸ್‌ಜಿ ಲಾಟರಿ ಇಂಡಿಯಾ, ಎಚ್‌ಸಿಎಲ್ ಸೇರಿದಂತೆ ಐಟಿಪಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

370 ಅಡಿ ಉದ್ದದ ಮೇಲ್ಸೇತುವೆ

ಐಟಿಪಿಬಿ ಮೆಟ್ರೊ ಸ್ಕೈವಾಕ್ 370 ಅಡಿಗಳಷ್ಟು ಉದ್ದವಾಗಿದ್ದು ರಸ್ತೆ ಮಟ್ಟದಿಂದ 24 ಅಡಿ ಎತ್ತರದಲ್ಲಿದೆ. ದೀರ್ಘಬಾಳಿಕೆಯ ಸ್ಟ್ರಕ್ಚರಲ್ ಸ್ಟೀಲ್ ಮತ್ತು ಕಾಂಕ್ರೀಟ್ ಬಳಸಿ ಆಧುನಿಕ ಶೈಲಿಯ ಸ್ಪರ್ಶ ನೀಡಲಾಗಿದೆ. ಮೆಟ್ರೊ ಪ್ರಯಾಣಿಕರು ರಸ್ತೆಗೆ ಇಳಿಯದೇ ಮಾಲ್‌ಗೆ ತೆರಳಿ ಆ ಮುಖಾಂತರ ಬಿಸಿನೆಸ್ ಪಾರ್ಕ್‌ನಲ್ಲಿರುವ ಕಂಪನಿಗಳಿಗೆ ತೆರಳಬಹುದು.

ಅಗ್ರಹಾರ ಮೆಟ್ರೊ ನಿಲ್ದಾಣದಿಂದ ಐಟಿಪಿಬಿ ಮತ್ತು ಪಾರ್ಕ್ ಸ್ಕ್ವೇರ್ ಮಾಲ್‌ಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆಗೆ ಗೌರಿಶಂಕರ್ ನಾಗಭೂಷಣಂ ಮತ್ತು ಸುಬ್ರಹ್ಮಣ್ಯ ಗುಡ್ಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.