ನಮ್ಮ ಮೆಟ್ರೊ
ಬೆಂಗಳೂರು: ಬಿಎಂಆರ್‌ಸಿಎಲ್‌ನ ಫೇಸ್ 3ರ ನಮ್ಮ ಮೆಟ್ರೊ ಯೋಜನೆಗೆ ಕಡಿಯಲಾಗುವ 6,800 ಮರಗಳಿಗೆ ಪರ್ಯಾಯವಾಗಿ ಎಲ್ಲಿ ಸಸಿಗಳನ್ನು ನೆಡುತ್ತೀರಿ ಎಂಬ ನಾಗರಿಕರ ಪ್ರಶ್ನೆಗೆ ‘ನಮ್ಮ ಮೆಟ್ರೊ’ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಲಿಲ್ಲ.
ನಮ್ಮ ಮೆಟ್ರೊದ ಫೇಸ್ 3ರಲ್ಲಿ ಜೆ.ಪಿ. ನಗರದಿಂದ ಕೆಂಪಾಪುರ ಕ್ರಾಸ್‌ವರೆಗಿನ ಡಬಲ್ ಡೆಕರ್ ಕಾರಿಡಾರ್–1 ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಕಾರಿಡಾರ್–2 ಯೋಜನೆಗೆ 11 ಸಾವಿರ ಮರಗಳನ್ನು ಕಡಿಯಲಾಗುತ್ತದೆ. ಇದಕ್ಕಾಗಿ ಸಾರ್ವಜನಿಕರ ಆಕ್ಷೇಪಣೆ ಆಲಿಸಲು ಸೋಮವಾರ ಬಿಎಂಆರ್‌ಸಿಎಲ್ ಸಭೆ ಕರೆದಿತ್ತು.
‘11 ಸಾವಿರದಷ್ಟು ಮರ ಕಡಿಯುವ ಯೋಜನೆ ಬಗ್ಗೆ ಮಾಹಿತಿ ನೀಡಿಲ್ಲ. ಅಲ್ಲದೆ, ಆಕ್ಷೇಪಣೆಗೆ 30 ದಿನ ಅವಕಾಶ ನೀಡಬೇಕು. ನೀವು ಎರಡು ದಿನ ಮಾತ್ರ ಅವಕಾಶ ನೀಡಿ ಸಭೆ ಮಾಡುತ್ತಿರುವುದು ಸರಿಯಲ್ಲ’ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಾರ್ವತಿ ಶ್ರೀರಾಮ ದೂರಿದರು.
‘ಹೈಕೋರ್ಟ್ ಸೂಚನೆಯಂತೆ 10 ದಿನ ಮೊದಲೇ ನೋಟಿಸ್ ನೀಡಬೇಕು. ಅದನ್ನೂ ಪಾಲಿಸಿಲ್ಲ. ಯೋಜನೆ ಬಗ್ಗೆ ಕೇಳಬೇಡಿ ಎಂದು ಹೇಳುವುದು ಸರಿಯಲ್ಲ. ಯೋಜನೆ ಎಲ್ಲಿ? ಹೇಗೆ ಬರುತ್ತದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸದಿದ್ದರೆ ಪರಿಸರದ ಮೇಲಾಗುವ ದುಷ್ಪರಿಣಾಮ
ವನ್ನು ಅಂದಾಜಿಸುವುದು ಹೇಗೆ’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ಪ್ರಶ್ನಿಸಿದರು.
‘ಫೇಸ್–3ಗೆ 11 ಸಾವಿರ ಮರಗಳನ್ನು ಕಡಿಯುತ್ತಿಲ್ಲ. 6800 ಮರಗಳನ್ನು ಮಾತ್ರ ಕಡಿಯಲಾಗುತ್ತಿದೆ. ಉಳಿದ 4,200 ಮರಗಳಲ್ಲಿ ಆದಷ್ಟು ಉಳಿಸುವ ಪ್ರಯತ್ನ ಮಾಡುತ್ತೇವೆ. ಕೆಲವು ಕೊಂಬೆಗಳನ್ನು ಕತ್ತರಿಸುತ್ತೇವೆ, ಕೆಲವನ್ನು ಸ್ಥಳಾಂತರಿಸುತ್ತೇವೆ. ಒಂದು ಮರ ಕಡಿದರೆ 10 ಸಸಿಗಳನ್ನು ನೆಟ್ಟು ಬೆಳೆಸುತ್ತೇವೆ’ ಎಂದು ಬಿಎಂಆರ್‌ಸಿಎಲ್ ಪರಿಸರ ಎಂಜಿನಿಯರ್ ಕನಕರಾಜ್ ಹೇಳಿದರು
‘ಕಡಿದ ಮರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಒಂದಕ್ಕೆ ಹತ್ತು ಸಸಿಗಳನ್ನು ನೆಡುತ್ತೀರೋ ಅಥವಾ ಚಿಕ್ಕಬಳ್ಳಾಪುರ, ದೇವನಹಳ್ಳಿಯಂತಹ ದೂರದಪ್ರದೇಶಗಳಲ್ಲಿ ಸಸಿ ನೆಡುತ್ತೀರೋ’ ಎಂದು ಸಭೆಯಲ್ಲಿದ್ದ ಪರಿಸರ ಕಾರ್ಯಕರ್ತರಾದ ವೇಣುಗೋಪಾಲ್, ಪಲ್ಲವಿ ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡದೆ ಬಿಎಂಆರ್‌ಸಿಎಲ್ ಅಧಿಕಾರಿಗಳು ತಬ್ಬಿಬ್ಬಾದರು. ‘ಯಾವ ಯೋಜನೆಗಾಗಿ ಎಷ್ಟು ಮರಗಳನ್ನು ಕಡಿಯುತ್ತೀರಿ, ಇದಕ್ಕೆ ಪರ್ಯಾಯವಾಗಿ ಎಲ್ಲಿ ನೆಡಲಾಗುತ್ತದೆ ಎಂಬುದು ಪಾರದರ್ಶಕವಾಗಿರ
ಬೇಕು. ಯೋಜನೆಯ ವಿವರಗಳನ್ನು ನೀಡಬೇಕು’ ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದರು.
‘30 ದಿನಗಳ ನಂತರ ಸಭೆ ನಡೆಸಿ ಮಾಹಿತಿ ನೀಡುತ್ತೇವೆ’ ಎಂದು ಬಿಎಂ
ಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.