ADVERTISEMENT

ಮೆಟ್ರೊ ಸುರಂಗ ಕಾಮಗಾರಿ: ಮನೆಗೆ ಹಾನಿ

ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರ ಸ್ಥಳಾಂತರಕ್ಕೆ ಬಿಎಂಆರ್‌ಸಿಎಲ್‌ ಮನವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 19:59 IST
Last Updated 21 ಡಿಸೆಂಬರ್ 2020, 19:59 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನೆಲದಡಿಯ ನಿಲ್ದಾಣಗಳ ನಿರ್ಮಾಣಕ್ಕಾಗಿ ಸುರಂಗ ಕೊರೆಯುವ ಕಾಮಗಾರಿ ನಡೆಯುತ್ತಿದೆ. ಶಿವಾಜಿನಗರದಲ್ಲಿ ಈ ಕಾಮಗಾರಿ ಬಿರುಸಿನಿಂದ ಸಾಗಿದ್ದು, ಮಾರ್ಗದ ಬಳಿಯ ಕೆಲವು ಮನೆಗಳಿಗೆ ಹಾನಿಯಾಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ನಡುವೆ, ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ನಿವಾಸಿಗಳ ಸ್ಥಳಾಂತರಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ ಸೂಚನೆ ನೀಡಿದೆ.

ಕಂಟೋನ್ಮೆಂಟ್‌ ನಿಲ್ದಾಣದಿಂದ ಸುರಂಗ ಕೊರೆಯುತ್ತಿರುವ ಯಂತ್ರಗಳು (ಟಿಬಿಎಂ) ಇನ್ನೂ 200 ಮೀಟರ್ ದೂರ ಕೂಡ ಸಾಗಿಲ್ಲ. ಆದರೂ, ಈ ಮಾರ್ಗದ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಶುರುವಾಗಿದೆ.

ಕಂಟೋನ್ಮೆಂಟ್ ಮೆಟ್ರೊ ನಿಲ್ದಾಣ-ಶಿವಾಜಿನಗರ ನಡುವೆ ಬರುವ ಬಂಬೂ ಬಜಾರ್ ಸಮೀಪದ ರಸ್ತೆಯಲ್ಲಿ ಅಬ್ದುಲ್ ರಜಾಕ್ ಎಂಬುವರ ಮನೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಘಟನೆ ನಂತರ, ತಮ್ಮ ಮನೆಗಳಿಗೂ ಹಾನಿಯಾಗಬಹುದು ಎಂದು ಈ ಮಾರ್ಗದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕೇವಲ ಎರಡು ವರ್ಷಗಳ ಹಿಂದೆ ನಾವು ಮನೆ ಕಟ್ಟಿದ್ದೆವು. ಆದರೆ, ಸುಮಾರು ಹತ್ತು ದಿನಗಳ ಹಿಂದೆ ನೆಲದಡಿಯ ಮೆಟ್ರೊ ಕಾಮಗಾರಿಯಿಂದ ಮನೆಯಲ್ಲಿ ಬಿರುಕು ಕಾಣಿಸಿಕೊಂಡಿವೆ. ಮೊಣಕಾಲುವರೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಈ ಸಂದರ್ಭದಲ್ಲಿ ನಾವ್ಯಾರೂ ಮನೆಯಲ್ಲಿ ಇರಲಿಲ್ಲ. ಕೆಲಸದಿಂದ ವಾಪಸ್ ಬಂದಾಗಲೇ ಇದು ಗೊತ್ತಾಗಿದ್ದು’ ಎಂದು ಅಬ್ದುಲ್ ರಜಾಕ್ ಹೇಳಿದರು.

‘ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಸ್ಥಳಾಂತರಗೊಳ್ಳುವಂತೆ ಬಿಎಂಆರ್‌ಸಿಎಲ್ ಸೂಚಿಸಿತು. ಹೋಟೆಲ್‌ಗೆ ತೆರಳಿ ಅಥವಾ ಸಂಬಂಧಿಕರ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವಂತೆ ಹೇಳಿತು. ಇದಕ್ಕೆ ಪ್ರತಿಯಾಗಿ ಪರಿಹಾರ ನೀಡುವುದಾಗಿಯೂ ಹೇಳಿತ್ತು. ಅದರಂತೆ ಸಂಬಂಧಿಕರ ಮನೆಗೆ ತೆರಳಿದ್ದೆವು. ಮೊನ್ನೆಯಷ್ಟೇ ಮನೆಗೆ ವಾಪಸ್ ಆಗಿದ್ದೇವೆ. ಇನ್ನೂ ಪರಿಹಾರ ಬಂದಿಲ್ಲ’ ಎಂದರು.

‘ನಾವು ಮನೆ ಕಟ್ಟಿದ ಜಾಗದಲ್ಲಿ ಹಿಂದೆ ತೆರೆದ ಬಾವಿ ಇತ್ತು. ಅದನ್ನು ಮುಚ್ಚಿ, ಆ ಜಾಗದಲ್ಲಿ ಮನೆ ನಿರ್ಮಿಸಲಾಗಿತ್ತು. ಎರಡು ವರ್ಷದ ಹಿಂದೆ ಒಂದು ಮಹಡಿಯ ಕಾಂಕ್ರೀಟ್ ಮನೆ ಮಾಡಿಕೊಂಡಿದ್ದೆವು. ನೆರೆಯ ಮನೆಗಳಲ್ಲೂ ಇದೇ ರೀತಿ, ಮೆಟ್ರೊ ಕಾಮಗಾರಿಯಿಂದ ನೀರು ನುಗ್ಗುವುದರ ಜತೆಗೆ ಬಿರುಕುಗಳು ಕಾಣಿಸಿಕೊಂಡಿವೆ’ ಎಂದೂ ಅವರು ಮಾಹಿತಿ ನೀಡಿದರು.

‘ಒಂದು ಮನೆಯಲ್ಲಿ ಬಿರುಕು ಕಾಣಿಸಿಕೊಂಡು, ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಬಾವಿಯನ್ನು ಸರಿಯಾಗಿ ಮುಚ್ಚಿಲ್ಲದಿರುವುದು ಇದಕ್ಕೆ ಕಾರಣ ಆಗಿರಬಹುದು. ನೆಲದಿಂದ 20 ಮೀಟರ್ ಆಳದಲ್ಲಿ ಸುರಂಗ ಕಾಮಗಾರಿ ನಡೆದಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರಿಗೆ ಸ್ಥಳಾಂತರಕ್ಕೆ ಮನವಿ ಮಾಡಿದ್ದೇವೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.

ಉದ್ದೇಶಿತ ಮಾರ್ಗದ ಉದ್ದ 855 ಮೀಟರ್. ಇದರಲ್ಲಿ 250 ಮೀಟರ್ ಗಟ್ಟಿಕಲ್ಲು ಹಾಗೂ 350 ಮೀ. ಮಣ್ಣು-ಕಲ್ಲು ಮಿಶ್ರಣದಿಂದ ಕೂಡಿದೆ ಎಂದು ಅಧಿಕಾರಿಗಳು ಹೇಳಿದರು.

ಆತಂಕಪಡುವ ಅಗತ್ಯವಿಲ್ಲ:ಬಿಎಂಆರ್‌ಸಿಎಲ್
ಒಂದು ಮನೆಯಲ್ಲಿ ಬಿರುಕು ಕಾಣಿಸಿಕೊಂಡು, ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಬಾವಿಯನ್ನು ಸರಿಯಾಗಿ ಮುಚ್ಚಿಲ್ಲದಿರುವುದು ಇದಕ್ಕೆ ಕಾರಣ ಆಗಿರಬಹುದು. ನೆಲದಿಂದ 20 ಮೀಟರ್ ಆಳದಲ್ಲಿ ಸುರಂಗ ಕಾಮಗಾರಿ ನಡೆದಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರಿಗೆ ಸ್ಥಳಾಂತರಕ್ಕೆ ಮನವಿ ಮಾಡಿದ್ದೇವೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.

ಉದ್ದೇಶಿತ ಮಾರ್ಗದ ಉದ್ದ 855 ಮೀಟರ್. ಇದರಲ್ಲಿ 250 ಮೀಟರ್ ಗಟ್ಟಿಕಲ್ಲು ಹಾಗೂ 350 ಮೀ. ಮಣ್ಣು-ಕಲ್ಲು ಮಿಶ್ರಣದಿಂದ ಕೂಡಿದೆ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.