ADVERTISEMENT

ಆಲ್‌ ಸೇಂಟ್ಸ್‌ ಚರ್ಚ್‌ ಬಳಿ ಮೆಟ್ರೊ ಕಾಮಗಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 14:38 IST
Last Updated 28 ನವೆಂಬರ್ 2021, 14:38 IST
ಮೆಟ್ರೊ ಕಾಮಗಾರಿಗೆ ಪಾರಂಪರಿಕ ಕಟ್ಟಡ ಹಾಗೂ ಜೀವವೈವಿಧ್ಯ ಬಲಿಕೊಡಬಾರದು ಎಂದು ಒತ್ತಾಯಿಸಿ ಆಲ್‌ ಸೇಂಟ್ಸ್‌ ಚರ್ಚ್‌ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಭಾನುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ಮೆಟ್ರೊ ಕಾಮಗಾರಿಗೆ ಪಾರಂಪರಿಕ ಕಟ್ಟಡ ಹಾಗೂ ಜೀವವೈವಿಧ್ಯ ಬಲಿಕೊಡಬಾರದು ಎಂದು ಒತ್ತಾಯಿಸಿ ಆಲ್‌ ಸೇಂಟ್ಸ್‌ ಚರ್ಚ್‌ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಭಾನುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಾಗವಾರ–ಗೊಟ್ಟಿಗೆರೆ ಮಾರ್ಗದ ವೆಲ್ಲಾರ ಜಂಕ್ಷನ್‌ನಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಆಲ್‌ ಸೇಂಟ್ಸ್‌ಚರ್ಚ್‌ನ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

‘ಎಲ್ಲರೂ ಒಟ್ಟಾಗಿ ಬೆಂಗಳೂರಿನ ಶ್ರೀಮಂತ ಪರಂಪರೆ ಹಾಗೂ ಜೀವವೈವಿಧ್ಯತೆ ಉಳಿಸೋಣ’ ಎಂಬ ಘೋಷವಾಕ್ಯದಡಿ ಆಲ್‌ ಸೇಂಟ್ಸ್‌ ಚರ್ಚ್ ಆವರಣದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ‘ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತನ್ನ ಮೂಲ ಸಮಗ್ರ ಯೋಜನಾ ವರದಿ (ಡಿಪಿಆರ್‌) ಹಾಗೂ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದ ನಿರ್ಮಾಣಕ್ಕೆ ಚರ್ಚ್‌ನ ಜಾಗವನ್ನು ಸ್ವಾಧೀನಪಡಿಸಿಕೊಳ್ಳಿವುದು ಸರಿಯಲ್ಲ. ನಿಗಮದ ಈ ಕ್ರಮದಿಂದ150 ವರ್ಷಗಳ ಹಳೆಯ ಚರ್ಚ್‌ ಅನ್ನು ನೆಲಸಮ ಮಾಡಬೇಕಾಗುತ್ತದೆ. ಅಲ್ಲದೆ, ಚರ್ಚ್‌ ಆವರಣದಲ್ಲಿರುವ 100ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಬೇಕಾಗುತ್ತದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದು ಚರ್ಚ್‌ನ ಸದಸ್ಯ ರೊನಾಲ್ಡ್‌ ಫರ್ನಾಂಡಿಸ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಚರ್ಚ್‌ ಜಾಗ ಹೊರತು ಪಡಿಸಿ, ರಕ್ಷಣಾ ಇಲಾಖೆಯಲ್ಲಿನ ಜಾಗದಲ್ಲಿ ನಿಲ್ದಾಣ ನಿರ್ಮಾಣ ಮಾಡಲು ಅವಕಾಶವಿದೆ. ನಿಗಮ ಈ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಒತ್ತಾಯಿಸಿದರು.

ಚರ್ಚ್‌ನ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಆನ್‌ಲೈನ್ ವೇದಿಕೆಯಲ್ಲಿಯೂ ‘ಆಲ್‌ ಸೇಂಟ್ಸ್‌ ಚರ್ಚ್‌ ರಕ್ಷಿಸಿ’ ಎಂಬ ಆಗ್ರಹದೊಂದಿಗೆ ಸಹಿ ಸಂಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.