ADVERTISEMENT

ಮೆಟ್ರೊ ಕಾಮಗಾರಿಗೆ ಚರ್ಚ್‌ ಸದಸ್ಯರ ವಿರೋಧ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:02 IST
Last Updated 23 ಜೂನ್ 2019, 20:02 IST
ಚರ್ಚ್‌ ಸದಸ್ಯರು ಫಲಕಗಳನ್ನು ಹಿಡಿದು ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ
ಚರ್ಚ್‌ ಸದಸ್ಯರು ಫಲಕಗಳನ್ನು ಹಿಡಿದು ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿ ನೆಪದಲ್ಲಿ ನಗರದ ರಿಚ್‌ಮಂಡ್‌ ಟೌನ್‌ ಬಳಿ ಇರುವ ಪಾರಂಪರಿಕ ಆಲ್‌ ಸೈಂಟ್‌ ಚರ್ಚ್‌ಗೆ ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಚರ್ಚ್‌ನ ಸದಸ್ಯರುಭಾನುವಾರ ಕಪ್ಪು ಬಟ್ಟೆ ಪ್ರದರ್ಶಿಸಿ ರ‍್ಯಾಲಿ ನಡೆಸಿದರು.

‘ಚರ್ಚ್‌ನ ಆವರಣದಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಚರ್ಚ್‌ ಬಳಿ ಸಲಕರಣೆಗಳನ್ನು ಇಡಲುತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಶೆಡ್‌ ನಿರ್ಮಾಣಕ್ಕೆ ಚರ್ಚ್‌ ಆವರಣದಲ್ಲಿರುವ 180 ಮರಗಳನ್ನು ಕಡಿಯಲು ನಿರ್ಧರಿಸಿದ್ದು, ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಕಾಮಗಾರಿ ನೆಪದಲ್ಲಿ ಮರಗಳ ಮಾರಣಹೋಮ ನಡೆಯಲು ಬಿಡುವುದಿಲ್ಲ’ ಎಂದು ದಕ್ಷಿಣ ಭಾರತದ ಚರ್ಚ್‌ ಅಸೋಸಿಯೇಷನ್‌ನ ಸದಸ್ಯ ಗುರುಪ್ರಸಾದ್‌ ಹೇಳಿದರು.

ಚರ್ಚ್‌ಗೆ ಸೇರಿರುವ 40 ಸಾವಿರ ಚದರ ಅಡಿ ಜಾಗವನ್ನು ನೀಡುವಂತೆಮೆಟ್ರೊದವರು ಬೇಡಿಕೆ ಇಟ್ಟಿದ್ದಾರೆ. ಚರ್ಚ್‌ ಆವರಣದಲ್ಲಿ ಅಂಗವಿಕಲ ಮಕ್ಕಳಿಗೆ ಶಾಲೆ ನಡೆಸಲಾಗುತ್ತಿದೆ. ನೂರು ವರ್ಷಕ್ಕೂ ಹಳೆಯದಾದ‌ಮರಗಳಿವೆ. ಸದ್ಯ ಸ್ಥಳಾವಕಾಶ ಕಡಿಮೆ ಇರುವ ಕಾರಣ ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ರಮ ಕೈಗೊಂಡು ಶೆಡ್‌ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಸಾಮಾಜಿಕ ಕಾರ್ಯಕರ್ತೆ ಬೃಂದಾ ಅಡಿಗೆ ಮಾತನಾಡಿ, ‘ಸರ್ಕಾರದ ಅಧೀನದಲ್ಲಿರುವ ಹಲವಾರು ಕಟ್ಟಡಗಳು ಚರ್ಚ್‌ ಅಕ್ಕಪಕ್ಕದಲ್ಲಿವೆ. ಅಲ್ಲಿ ಶೆಡ್‌ ನಿರ್ಮಿಸಲು ಬೇಕಾದಷ್ಟು ಸ್ಥಳವಿದೆ. ಆದರೆ, ಉದ್ದೇಶಪೂರ್ವಕವಾಗಿ ಚರ್ಚ್‌ಗೆ ಹಾನಿ ಮಾಡಲು ಮುಂದಾಗಿದ್ದಾರೆ. ಇದರಲ್ಲಿ ಕ್ರೈಸ್ತ ಧರ್ಮದ ಮುಖ್ಯಸ್ಥರೂ ಭಾಗಿಯಾಗಿದ್ದಾರೆ. ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಅವರಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದರು.

‘ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಕಾಮಗಾರಿ ನಡೆಸುವ ಅವಶ್ಯಕತೆ ಏನು, ಅಭಿವೃದ್ಧಿಯ ಹೆಸರಿನಲ್ಲಿ ಚರ್ಚ್‌ಗೆ ಹಾನಿ ಮಾಡಬಾರದು’ ಎಂದುಪರಿಸರವಾದಿ ಅರುಣ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.