ಬೆಂಗಳೂರು: ಸ್ವತಂತ್ರ ಸುರಕ್ಷತಾ ಮೌಲ್ಯಮಾಪನಾ ಪ್ರಮಾಣಪತ್ರ ಇನ್ನೂ ಸಿಗದೇ ಇರುವುದರಿಂದ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸಂಚಾರ ಮತ್ತೆ ಮುಂದಕ್ಕೆ ಹೋಗಿದೆ. ಜೂನ್ ಬದಲು ಜುಲೈಯಲ್ಲಿ ಸಂಚಾರ ಪ್ರಾರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಇಟ್ಟುಕೊಂಡಿದೆ.
ಬೊಮ್ಮಸಂದ್ರ–ಆರ್.ವಿ. ರಸ್ತೆ ನಡುವಿನ ಈ ಮಾರ್ಗದಲ್ಲಿ ಹಳಿ ಅಳವಡಿಕೆ, ನಿಲ್ದಾಣ ನಿರ್ಮಾಣ ಕಾಮಗಾರಿಗಳು ವರ್ಷದ ಹಿಂದೆಯೇ ಪೂರ್ಣಗೊಂಡಿತ್ತು. ಚಾಲಕ ರಹಿತ ಎಂಜಿನ್ ಹೊಂದಿರುವ ಪ್ರೊಟೊಟೈಪ್ (ಮೂಲ ಮಾದರಿ) ಮೊದಲ ರೈಲು 2024ರ ಏಪ್ರಿಲ್‌ನಲ್ಲೇ ಬಂದಿತ್ತು. ಅದೇ ರೈಲು ಬಳಸಿಕೊಂಡು ಸುಮಾರು ಮೂರು ತಿಂಗಳು ವಿವಿಧ ತಂತ್ರಜ್ಞರು ಹಳದಿ ಮಾರ್ಗದಲ್ಲಿ ಹಲವು ಪರೀಕ್ಷೆ
ಗಳನ್ನು ನಡೆಸಿದ್ದರು. ಚಾಲಕ ರಹಿತ ಎಂಜಿನ್ ಕೋಚ್‌ನಲ್ಲಿ ಸಂಚರಿಸಿ ಟ್ರ್ಯಾಕ್ಷನ್ ಮತ್ತು ಬ್ರೇಕಿಂಗ್ ಪರೀಕ್ಷೆ ಕೂಡಾ ಮಾಡಿದ್ದರು.
ಬಳಿಕ ಸೆಪ್ಟೆಂಬರ್‌ನಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆಗಳನ್ನು ನಡೆಸಿತ್ತು. ರೋಲಿಂಗ್ ಸ್ಟಾಕ್ (ರೈಲು) ತಜ್ಞರು, ಹಳಿ ತಂತ್ರಜ್ಞರು, ಬ್ರೇಕ್ ತಂತ್ರಜ್ಞರು, ವಿವಿಧ ತಾಂತ್ರಿಕ ಪರಿಣಿತರ ತಂಡದ ಸದಸ್ಯರು ಈ
ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು.
ಆದರೆ, ಆನಂತರ ರೈಲುಗಳ ಪೂರೈಕೆಯಾಗದೇ ಅಲ್ಲಿಗೆ ಪ್ರಗತಿ ನಿಂತು ಹೋಗಿತ್ತು. 2025ರ ಜನವರಿಯಲ್ಲಿ ಪ್ರೊಟೊಟೈಪ್ ಎರಡನೇ ರೈಲು, ಮೇ ತಿಂಗಳಲ್ಲಿ ಮೂರನೇ ರೈಲು ಬಂದಿತ್ತು. ಮೂರು ರೈಲುಗಳು ಬಂದ ಮೇಲೆ ಅರ್ಧಗಂಟೆಗೊಮ್ಮೆ ರೈಲು ಓಡಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದರು. ಇದೀಗ ಮೂರು ರೈಲುಗಳು ಬಂದಿದ್ದರೂ ಸಂಚಾರದ ದಿನ ಮುಂದಕ್ಕೆ ಹೋಗುತ್ತಲೇ ಇದೆ.
‘ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ಐಎಸ್‌ಎ) ಎಲ್ಲ ದಾಖಲೆ, ಅಂಕಿ ಅಂಶಗಳನ್ನು ಪರಿಶೀಲಿಸಿದ ಬಳಿಕ ಪ್ರಮಾಣ ಪತ್ರ ನೀಡುತ್ತಾರೆ. ಆ ಪ್ರಮಾಣ ಪತ್ರವನ್ನು ರೈಲ್ವೆಯ ಮೆಟ್ರೊ ರೈಲು ಸುರಕ್ಷತಾ ಆಯೋಗಕ್ಕೆ (ಸಿಎಂಎಸ್‌ಆರ್) ಸಲ್ಲಿಸಲಾಗುವುದು. ಬಳಿಕ ಸಿಎಂಎಸ್‌ಆರ್ ಆಯುಕ್ತರು ಬಂದು ಅಂತಿಮ ಪರಿಶೀಲನೆ ನಡೆಸುತ್ತಾರೆ. ಅವರು ಸಂಚಾರಕ್ಕೆ ಒಪ್ಪಿಗೆ ನೀಡಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನ ಸಂಚಾರ ಆರಂಭವಾಗುತ್ತದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ‘ಜುಲೈ ಹೊತ್ತಿಗೆ ಇನ್ನೂ ಒಂದು ರೈಲು ಬಂದು ಸೇರಲಿದೆ’ ಎಂದಿದ್ದಾರೆ.
ಹಳದಿ ಮಾರ್ಗವು ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೊಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ. ರಸ್ತೆ ನಿಲ್ದಾಣಗಳನ್ನು ಹೊಂದಿದೆ. ದಕ್ಷಿಣ ಬೆಂಗಳೂರನ್ನು (ಎಲೆಕ್ಟ್ರಾನಿಕ್ ಸಿಟಿ) ನಗರದ ಕೇಂದ್ರಕ್ಕೆ ಸಂಪರ್ಕಿಸುವ ಈ ಮಾರ್ಗವು 18.8 ಕಿ.ಮೀ ಉದ್ದವನ್ನು ಹೊಂದಿದೆ.
‘ಯಲ್ಲೊ ಮೆಟ್ರೊ ಎಲ್ಲೊ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಎಲ್ಲ ಕಾಮಗಾರಿ ಮುಗಿದು ವರ್ಷಗಟ್ಟಲೆ ಕಾಯುವುದು ಬಿಎಂಆರ್‌ಸಿಎಲ್‌ಗೆ ಕೋಟ್ಯಂತರ ರೂಪಾಯಿ ನಷ್ಟವನ್ನು ಉಂಟು ಮಾಡಿರುತ್ತದೆ. ಆದಷ್ಟು ಬೇಗ ಸಂಚಾರ ಆರಂಭಿಸಿದರೆ ಪ್ರಯಾಣಿಕರಿಗೂ ಅನುಕೂಲ. ಬಿಎಂಆರ್‌ಸಿಎಲ್‌ಗೂ ಆದಾಯ’ ಎಂದು ಮೆಟ್ರೊ ಪ್ರಯಾಣಿಕ ಎಚ್. ರಮೇಶ್ ತಿಳಿಸಿದರು.
ಐಎಸ್‌ಎ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ. ಪ್ರಮಾಣಪತ್ರ ಬಂದ ಕೂಡಲೇ ಸುರಕ್ಷತಾ ಆಯೋಗಕ್ಕೆ ಕಳುಹಿಸಲಾಗುವುದು.ಎಂ. ಮಹೇಶ್ವರ ರಾವ್ ವ್ಯವಸ್ಥಾಪಕ ನಿರ್ದೇಶಕ ಬಿಎಂಆರ್‌ಸಿಎಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.