ADVERTISEMENT

₹6 ಸಾವಿರ ವೇತನ ನೀಡುವಂತೆ ಬಿಸಿಯೂಟ ತಯಾರಕರ ಒತ್ತಾಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಬಿಸಿಯೂಟ ತಯಾರಕರ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 21:58 IST
Last Updated 10 ಅಕ್ಟೋಬರ್ 2023, 21:58 IST
<div class="paragraphs"><p>ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ರಾಜ್ಯ ಸಮಿತಿ ಸದಸ್ಯರು</p></div>

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ರಾಜ್ಯ ಸಮಿತಿ ಸದಸ್ಯರು

   

ಬೆಂಗಳೂರು: ಬಿಸಿಯೂಟ ತಯಾರಕ ರಿಗೆ ಮಾಸಿಕ ₹6 ಸಾವಿರ ವೇತನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ಫೆಡರೇಷನ್‌ ರಾಜ್ಯ ಸಮಿತಿಯ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ADVERTISEMENT

‘ರಾಜ್ಯ ಸರ್ಕಾರ ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಮಾಡುತ್ತಿದೆ. 2022ರ ಡಿಸೆಂಬರ್‌ 8ರಂದು ಯೋಜನೆಯ ಆಯುಕ್ತರು ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಹೆಸರಿನಲ್ಲಿ ಜಂಟಿ ಖಾತೆ ತೆರೆಯುವಂತೆ ಆದೇಶಿಸಿದ್ದರು. ಕೂಡಲೇ ಆ ಆದೇಶವನ್ನು ಹಿಂಪಡೆದು ಮುಖ್ಯೋಪಾಧ್ಯಾಯ ಮತ್ತು ಮುಖ್ಯ ಅಡುಗೆಯವರ ಜಂಟಿ ಬ್ಯಾಂಕ್
ಖಾತೆ ಯನ್ನು ಮುಂದುವರಿಸಬೇಕು’ ಎಂದು ಪ್ರತಿಭಟನಕಾರರು
ಆಗ್ರಹಿಸಿದ್ದಾರೆ.

‘ಬಿಸಿಯೂಟ ತಯಾರಕರನ್ನು ಮಾರ್ಚ್‌ 31ಕ್ಕೆ ಬಿಡುಗಡೆಗೊಳಿಸಿ ಜೂನ್‌ 1ಕ್ಕೆ ಪುನಃ ನೇಮಕಾತಿ ಮಾಡಿಕೊಳ್ಳುವ ಆದೇಶವನ್ನು ಹಿಂಪಡೆಯಬೇಕು. ಜತೆಗೆ ಸೇವಾ ಭದ್ರತೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೊಪ್ಪಳ ಜಿಲ್ಲೆಯ ಬೋಚನಹಳ್ಳಿಯ ದೇವಮ್ಮ, ಹಾವೇರಿ ಜಿಲ್ಲೆಯ ಕಾಡಶೆಟ್ಟಿಹಳ್ಳಿಯ ನಿರ್ಮಲಾ ದೊಡ್ಡಮನಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಅನ್ನಪೂರ್ಣಮ್ಮ ಹಳ್ಯಾಳ ಅವರು ಶಾಲೆಯಲ್ಲಿ ಅಡುಗೆ ತಯಾರಿಸುವ ವೇಳೆ ಅವಘಡ ಸಂಭವಿಸಿ ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರ ಅವರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘20 ವರ್ಷ ಕಾರ್ಯನಿರ್ವಹಿಸಿ ನಿವೃತ್ತಿಯಾದ ಮತ್ತು ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಿದ ಬಿಸಿಯೂಟ ತಯಾರಕ ರಿಗೆ ₹2.50 ಲಕ್ಷ ಇಡಿಗಂಟು ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಸಿಯೂಟ ತಯಾರಕರಿಗೆ ಹೆಚ್ಚುವರಿಯಾಗಿ
₹1 ಸಾವಿರ ನೀಡುವಂತೆ ಬಜೆಟ್‌ನಲ್ಲಿ ಷೋಷಿಸಿದ್ದರು. ಅದನ್ನು ಜೂನ್‌ ತಿಂಗಳಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಅಡುಗೆ ಸಿಬ್ಬಂದಿಗೆ ವರ್ಷಕ್ಕೆ ಎರಡು ಬಾರಿ ಸಮವಸ್ತ್ರ, ಎಪ್ರಾನ್, ಟೋಪಿ ಮತ್ತು ಕೈಗವಸುಗಳನ್ನು ನೀಡಬೇಕು’ ಎಂದು
ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.