ADVERTISEMENT

ಬೆಂಗಳೂರು: ಅಕ್ಷರ ದಾಸೋಹ ಕಾರ್ಮಿಕರ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 16:06 IST
Last Updated 14 ಫೆಬ್ರುವರಿ 2025, 16:06 IST
ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ 
ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ಕನಿಷ್ಠ ವೇತನ ಜಾರಿ ಮಾಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯರು (ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್ ಯೂನಿಯನ್‌ ಸೆಂಟರ್‌ – ಎಐಯುಟಿಯುಸಿ) ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಬಿಸಿಯೂಟ ಕಾರ್ಮಿಕರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಯಂತೆ ಗೌರವಧನವನ್ನು ಹೆಚ್ಚಿಸಬೇಕು ಎಂದೂ ಆಗ್ರಹಿಸಿದರು.

ಆಯಾ ತಿಂಗಳ ವೇತನವನ್ನು ಪ್ರತಿತಿಂಗಳ 5ರ ಒಳಗಾಗಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಪಾವತಿ ಮಾಡಬೇಕು. ತಿಂಗಳ ವೇತನ ಚೀಟಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಎಲ್ಲಾ ಕಾರ್ಮಿಕರಿಗೂ ಜೀವ ವಿಮೆ ಯೋಜನೆಯನ್ನು ಜಾರಿಗೆ ತರಬೇಕು. ಸರ್ಕಾರವೇ ಅದರ ಕಂತಿನ ಮೊತ್ತವನ್ನು ಪಾವತಿಸಬೇಕು. ಬಿಸಿಯೂಟ ಕಾರ್ಮಿಕರಿಗೆ ನಿವೃತ್ತಿ ವೇತನ ಅನುಷ್ಠಾನಕ್ಕೆ ತರಬೇಕು. 10 ತಿಂಗಳ ಬದಲಿಗೆ 12 ತಿಂಗಳ ಗೌರವಧನ ಪಾವತಿಸಬೇಕು ಎಂದು ಆಗ್ರಹಿಸಿದರು.

ಬಿಸಿಯೂಟ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ, ಸೇವಾ ಭದ್ರತೆ ಒದಗಿಸಬೇಕು. ಬರಗಾಲದ ಕಾರಣ ನೀಡಿ ಕಳೆದ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳ ಗೌರವಧನವನ್ನು ಬಿಡುಗಡೆ ಮಾಡಿಲ್ಲ. ತಕ್ಷಣವೇ ಆ ಹಣವನ್ನು ಬಿಸಿಯೂಟ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.

ರಾಜ್ಯದ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. ಅದರಂತೆ ಮಕ್ಕಳ ಶೈಕ್ಷಣಿಕ ಬದುಕಿಗೆ ನೆರವಾಗುತ್ತಿರುವ ಅಕ್ಷರ ದಾಸೋಹ ಸಿಬ್ಬಂದಿಗೂ ಕನಿಷ್ಠ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಅಧ್ಯಕ್ಷೆ ಎ.ಶಾಂತಾ, ರಾಜ್ಯ ಕಾರ್ಯದರ್ಶಿ ಪಿ.ಎಸ್‌.ಸಂಧ್ಯಾ ಮತ್ತು ಇತರ ಮುಖಂಡರು ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.