ADVERTISEMENT

ವೇತನ ಹೆಚ್ಚಳಕ್ಕೆ ಬಿಸಿಯೂಟ ನೌಕರರ ಪಟ್ಟು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 21:26 IST
Last Updated 3 ಮಾರ್ಚ್ 2021, 21:26 IST
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೇಲ್ಸೇತುವೆಯಲ್ಲಿ ಸಾಗಿದ ಬಿಸಿಯೂಟ ನೌಕರರ ಪ್ರತಿಭಟನಾ ಮೆರವಣಿಗೆ–ಪ್ರಜಾವಾಣಿ ಚಿತ್ರ
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೇಲ್ಸೇತುವೆಯಲ್ಲಿ ಸಾಗಿದ ಬಿಸಿಯೂಟ ನೌಕರರ ಪ್ರತಿಭಟನಾ ಮೆರವಣಿಗೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಸಿಯೂಟ ನೌಕರರಿಗೆ ಬಾಕಿ ವೇತನ ಬಿಡುಗಡೆ, ವೇತನ ಹೆಚ್ಚಳ, ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬಿಸಿಯೂಟ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಮ್ಮ ಬೇಡಿಕೆಗಳ ಘೋಷಣೆಗಳನ್ನು ಕೂಗುತ್ತಾ ಸುಡುಬಿಸಿಲನ್ನೂ ಲೆಕ್ಕಿಸದೆ, ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್.ವರಲಕ್ಷ್ಮಿ,‘ರಾಜ್ಯದಲ್ಲಿರುವ ಬಿಸಿಯೂಟ ನೌಕರರ ನಾಲ್ಕು ತಿಂಗಳಿನಿಂದ ವೇತನ ಸಿಕ್ಕಿಲ್ಲ.
ಇದರಿಂದ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬಾಕಿ ವೇತನದ ಜೊತೆಗೆ ಎಲ್ಲರಿಗೂ ವೇತನ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ರಾಜ್ಯದಲ್ಲಿ 1.17 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಬಡ ಮಹಿಳೆಯರು, ವಿಚ್ಛೇದಿತರು ಹಾಗೂ ವಿಧವೆಯರೇ ಆಗಿದ್ದಾರೆ. ಉದ್ಯೋಗವನ್ನೇ ಆಧರಿಸಿರುವ ನೌಕರರಿಗೆ ವೇತನ ಹೆಚ್ಚಿಸುವ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಿಸಿಯೂಟ ನೌಕರರನ್ನು ಕಾಯಂ ಮಾಡಿ, ಸೂಕ್ತ ಸವಲತ್ತುಗಳನ್ನು ಒದಗಿಸಬೇಕು. ಪ್ರತಿ ತಿಂಗಳು ವೇತನ ಸರಿಯಾಗಿ ನೀಡಬೇಕು. ಇವರ ಸಮಸ್ಯೆಗಳನ್ನು ಕುರಿತುಶಿಕ್ಷಣ ಇಲಾಖೆಯಡಿ ಮೇಲ್ವಿಚಾರಣೆ ನಡೆಸಬೇಕು. ನೌಕರರಿಗೆ ಕನಿಷ್ಠ ಕೂಲಿ ಹಾಗೂ ನಿವೃತ್ತಿ ವೇತನ ಸೌಲಭ್ಯ ಜಾರಿ ಮಾಡಬೇಕು. ಕೆಲಸದಿಂದದಿಢೀರ್ ವಜಾ ಮಾಡುತ್ತಿರುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಅಡುಗೆ ಮಾಡುವ ಸಂದರ್ಭದಲ್ಲಿ ಅವಘಡಗಳು ನಡೆದರೆ ಹಾಗೂ ಸೇವೆಯಲ್ಲಿರುವ ಸಂದರ್ಭದಲ್ಲಿ ಸಹಜ ಸಾವು ಸಂಭವಿಸಿದರೂ ಪರಿಹಾರ ನೀಡಬೇಕು. ನೂತನ ಶಿಕ್ಷಣ ನೀತಿಯಲ್ಲಿ ಬಿಸಿಯೂಟ ಪದ್ದತಿಯನ್ನು ಬಲಗೊಳಿಸಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಆಗ್ರಹಿಸಿದರು.

ಕಲ್ಯಾಣ ಮಂಟಪಗಳಿಗೆ ಸ್ಥಳಾಂತರ: ಪ್ರತಿಭಟನಕಾರರು ಕಾಳಿದಾಸ ರಸ್ತೆಯಲ್ಲೇ ಸಂಜೆವರೆಗೆ ಕೂತು ಪ್ರತಿಭಟನೆ ಮುಂದುವರಿಸಿದರು. ರಾತ್ರಿ ಅದೇ ರಸ್ತೆಯಲ್ಲಿ ನಿದ್ರಿಸಲು ನಿರ್ಧರಿಸಿದ್ದರು. ಆದರೆ, ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ, ಸ್ಥಳೀಯ ಕಲ್ಯಾಣ ಮಂಟಪಗಳಿಗೆ
ಸ್ಥಳಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.