ADVERTISEMENT

ಸೇನೆ ಜಾಗ ಮಾರಿದ ಸಿಎಸ್‌ಐ?

₹ 60 ಕೋಟಿ ಲಾಭ ಪಡೆದ ಆರೋಪ: ದೂರು ಕೊಟ್ಟ ಲೆಫ್ಟಿನೆಂಟ್ ಕರ್ನಲ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:51 IST
Last Updated 20 ಆಗಸ್ಟ್ 2019, 19:51 IST

ಬೆಂಗಳೂರು: ಸೇನೆಯಿಂದ ಭೋಗ್ಯಕ್ಕೆ ಪಡೆದಿದ್ದ ಜಾಗವನ್ನು ಮಾರಾಟ ಮಾಡಿ, ಅದಕ್ಕೆ ಪರಿಹಾರವಾಗಿ ₹ 60 ಕೋಟಿ ಪಡೆದಿರುವ ಆರೋಪದಡಿ ನಗರದ ಚರ್ಚ್ ಆಫ್‌ ಸೌತ್ ಇಂಡಿಯಾ (ಸಿಎಸ್‌ಐ) ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ.

‘ಮಾಲೀಕತ್ವದ ಅಧಿಕಾರ ಇಲ್ಲದಿದ್ದರೂ ಜಾಗವನ್ನು ಸಿಎಸ್‌ಐ ಅಡಳಿತ ಮಂಡಳಿ ಮಾರಾಟ ಮಾಡಿದೆ. ಆ ಮೂಲಕ ಸರ್ಕಾರಕ್ಕೆ ವಂಚಿಸಿದೆ’ ಎಂದು ಆರೋಪಿಸಿ ಲೆಫ್ಟಿನೆಂಟ್ ಕರ್ನಲ್ ಗಂಗಾಧರ್ ಎಂಬುವರು ದೂರು ನೀಡಿದ್ದಾರೆ.

‘ಸೇನೆಯ ಶಾಲೆ ಹಾಗೂ ಸಿಎಂಪಿ ಕೇಂದ್ರದ ಲೆಫ್ಟಿನೆಂಟ್ ಕರ್ನಲ್/ಕ್ವಾರ್ಟರ್ ಮಾಸ್ಟರ್ ಆಗಿರುವ ಗಂಗಾಧರ್ ನೀಡಿರುವ ದೂರು ಆಧರಿಸಿ, ವಂಚನೆ (ಐಪಿಸಿ 420) ಆರೋಪದಡಿಸಿಎಸ್‌ಐ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಅಶೋಕನಗರ ಪೊಲೀಸರು ಮಾಹಿತಿ ನೀಡಿದರು.

ADVERTISEMENT

ದೂರಿನ ವಿವರ: ‘ಡಿಫೆನ್ಸ್ ಎಸ್ಟೇಟ್ ಆಫೀಸರ್ ಆಫ್ ಬೆಂಗಳೂರು ಮಿಲಿಟರಿ ಸ್ಟೇಷನ್ ದಾಖಲೆಗಳ ಪ್ರಕಾರ, ಸೇನೆಗೆ ಸೇರಿದ್ದ ಸುಮಾರು 7,427 ಚದರ ಅಡಿ ಭೂಮಿಯನ್ನು ಸಿಎಸ್‌ಐ ಕರ್ನಾಟಕ ಕೇಂದ್ರಕ್ಕೆ 1865ರಲ್ಲಿ ಭೋಗ್ಯಕ್ಕೆ ನೀಡಲಾಗಿತ್ತು’ ಎಂದು ಗಂಗಾಧರ್ ದೂರಿನಲ್ಲಿ ತಿಳಿಸಿದ್ದಾರೆ.

‘ಭೋಗ್ಯಕ್ಕೆ ನೀಡಿದ್ದ ಜಾಗವನ್ನೇ ಸಿಎಸ್‌ಐ ಆಡಳಿತ ಮಂಡಳಿಯು ಸೇನೆಯ ಸ್ಥಳೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನೂ ನೀಡದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ನೀಡಿದೆ’ ಎಂದು ಆರೋಪಿಸಿದ್ದಾರೆ.

‘ಸೇನೆಯ ಜಾಗದ ಮಾರಾಟಕ್ಕೆ ಯಾವುದೇ ಹಕ್ಕಿಲ್ಲದಿದ್ದರೂ ಸಿಎಸ್‌ಐ ಆಡಳಿತ ಮಂಡಳಿ, ಅಕ್ರಮವಾಗಿ ಜಾಗವನ್ನು ಮಾರಿದೆ. ಜೊತೆಗೆ ತನ್ನದೇ ಜಾಗವೆಂದು ಹೇಳಿ, ಕೆಐಎಡಿಬಿ ಹಾಗೂ ಬಿಎಂಆರ್‌ಸಿಎಲ್‌ನಿಂದಲೂ₹ 60 ಕೋಟಿ ಪರಿಹಾರ ಪಡೆದುಕೊಂಡಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ನೋಟಿಸ್ ನೀಡಿ ವಿಚಾರಣೆ

‘ಆರೋಪಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡುವಂತೆ ದೂರುದಾರರನ್ನು ಕೋರಿದ್ದೇವೆ. ಅವು ಕೈ ಸೇರಿದ ಬಳಿಕ ಕಾನೂನು ತಜ್ಞರ ನೆರವು ಪಡೆದು ಪರಿಶೀಲನೆ ನಡೆಸಲಿದ್ದೇವೆ’ ಎಂದು ಪೊಲೀಸರು ಹೇಳಿದರು.

‘‍ವಂಚನೆ ಸಂಬಂಧ ಸಿಎಸ್‌ಐ ಆಡಳಿತ ಮಂಡಳಿಯವರಿಗೆ ನೋಟಿಸ್‌ ನೀಡಲಿದ್ದೇವೆ. ವಿಚಾರಣೆಗೆ ಕರೆಸಿ ಹೇಳಿಕೆ ಪಡೆಯಲಿದ್ದೇವೆ. ಅಗತ್ಯಬಿದ್ದರೆ,ಕೆಐಎಡಿಬಿ ಹಾಗೂ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೂ ನೋಟಿಸ್‌ ಕೊಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.