ADVERTISEMENT

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ: ಎಂಪೈರ್ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 21:02 IST
Last Updated 2 ಡಿಸೆಂಬರ್ 2022, 21:02 IST

ಬೆಂಗಳೂರು: ಗ್ರಾಹಕರ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವಂತೆ ಮಾಡಿ, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಎಂಪೈರ್ ಹೋಟೆಲ್ ವ್ಯವಸ್ಥಾಪಕರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಹೇಮಕುಮಾರ್ ಅವರ ದೂರು ಆಧರಿಸಿ ಎಂಪೈರ್ ಹೋಟೆಲ್ ವ್ಯವಸ್ಥಾಪಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ನೋಟಿಸ್ ನೀಡಿ ವಿಚಾರಣೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿ ಎಂಪೈರ್ ಹೋಟೆಲ್ ಇದೆ. ನ. 27ರಂದು ತಡರಾತ್ರಿ 2.25ರ ಸುಮಾರಿಗೆ ಹೋಟೆಲ್ ಎದುರು ಗ್ರಾಹಕರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿತ್ತು. ಇದರಿಂದ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.’

ADVERTISEMENT

‘ಸ್ಥಳಕ್ಕೆ ಹೋಗಿದ್ದ ಗಸ್ತು ವಾಹನದ ಸಿಬ್ಬಂದಿ, ಹೋಟೆಲ್ ಒಳಗೆ ಹೋಗಿ ಪರಿಶೀಲಿಸಿದ್ದರು. ಹೋಟೆಲ್‌ನ ಮೊದಲ ಮಹಡಿಯಲ್ಲಿ ಗ್ರಾಹಕರಿಗೆ ಆಹಾರ ಸರಬರಾಜು ಮಾಡಲಾಗುತ್ತಿತ್ತು. ಅದರ ಫೋಟೊ ತೆಗೆದುಕೊಂಡಿದ್ದ ಸಿಬ್ಬಂದಿ, ಕೆಲಸಗಾರರನ್ನು ಪ್ರಶ್ನಿಸಿದ್ದರು. ವ್ಯವಸ್ಥಾಪಕ ಹೇಳಿದ್ದರಿಂದ ಆಹಾರ ಸರಬರಾಜು ಮಾಡುತ್ತಿರುವುದಾಗಿ ಕೆಲಸಗಾರರು ಹೇಳಿದ್ದರು. ನಂತರ, ಹೋಟೆಲ್ ಬಂದ್ ಮಾಡಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.