ADVERTISEMENT

’ವರಮಾನ ಹೆಚ್ಚಿಸಲು ಸರಕು ಸಾಗಣೆಗೆ ಆದ್ಯತೆ ನೀಡಿ‘

ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ವೀಕ್ಷಿಸಿದ ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 16:01 IST
Last Updated 5 ಸೆಪ್ಟೆಂಬರ್ 2021, 16:01 IST
ಅಶ್ವಿನಿ ವೈಷ್ಣವ್  ಅವರು ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ವೀಕ್ಷಿಸಿದರು.  ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹಾಗೂ ಇತರ ಅಧಿಕಾರಿಗಳು ಇದ್ದರು
ಅಶ್ವಿನಿ ವೈಷ್ಣವ್  ಅವರು ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ವೀಕ್ಷಿಸಿದರು.  ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹಾಗೂ ಇತರ ಅಧಿಕಾರಿಗಳು ಇದ್ದರು   

ಬೆಂಗಳೂರು: ವಿಮಾನ ನಿಲ್ದಾಣದ ಮಾದರಿಯ ಮೂಲಸೌಕರ್ಯದೊಂದಿಗೆ ಬೈಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿದರು.

‘ಸರ್ ಎಂ.ವಿ. ಟರ್ಮಿನಲ್‌ನಲ್ಲಿ ಎಲ್ಲ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ನೈರುತ್ಯ ರೈಲ್ವೆ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ದಾಖಲಿಸುತ್ತಿರುವ ಈ ಟರ್ಮಿನಲ್, ವಿಮಾನ ನಿಲ್ದಾಣವನ್ನು ಹೋಲುವಂತೆ ವಿನ್ಯಾಸಗೊಳಿಸಿದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದು ದೇಶದಲ್ಲಿಯೇ ಮಾದರಿ ನಿಲ್ದಾಣವಾಗಲಿದೆ. ಈ ಯೋಜನೆಯ ಯಶಸ್ಸಿನಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದು’ ಎಂದು ಅಶ್ವಿನಿ ವೈಷ್ಣವ್ ಶ್ಲಾಘಿಸಿದರು.

‘ಸರಕು ಸಾಗಣೆಯ ಕೇಂದ್ರವಾಗಿ ಬೆಳೆಯುವ ಎಲ್ಲ ಅವಕಾಶಗಳು ಈ ಟರ್ಮಿನಲ್‌ಗೆ ಇವೆ. ವಿಶೇಷ ರೈಲುಗಳ ಮೂಲಕ ಎಲೆಕ್ಟ್ರಾನಿಕ್‌ ವಸ್ತುಗಳು, ಕೈಗಾರಿಕಾ ಸಲಕರಣೆಗಳು, ಜವಳಿ ಉತ್ಪನ್ನ ಮತ್ತು ಇತರೆ ಸರಕುಗಳ ಸಾಗಣೆ ಮಾಡುವುದರೊಂದಿಗೆ ವರಮಾನ ಹೆಚ್ಚಳಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಪ್ರಯಾಣಿಕ ರೈಲುಗಳಿಗೆ 7 ಪ್ಲಾಟ್‌ ಫಾರಂಗಳನ್ನು ನಿರ್ಮಿಸಲಾಗಿದೆ. ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಪ್ಲಾಟ್‌ಫಾರಂ ತಲುಪಲು ಸಬ್‌ವೇ ಮತ್ತು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಮೆಟ್ರೊ ರೈಲು ನಿಲ್ದಾಣಗಳ ಮಾದರಿಯಲ್ಲಿ ಎಲ್ಲ ಪ್ಲಾಟ್‌ಫಾರಂಗಳಿಗೂ ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗಿದೆ. ದಿನಕ್ಕೆ ಒಂದು ಲಕ್ಷ ಪ್ರಯಾಣಿಕರು ಓಡಾಡಬಹುದಾದಷ್ಟು ವಿಶಾಲ ಪ್ರದೇಶದಲ್ಲಿ ಟರ್ಮಿನಲ್ ತಲೆ ಎತ್ತಿದೆ’ ಎಂದರು.

ಸಂಸದ ಪಿ.ಸಿ. ಮೋಹನ್, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್, ಪ್ರಧಾನ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಹರಿಶಂಕರ್ ವರ್ಮಾ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್, ಮುಖ್ಯ ಆಡಳಿತ ಅಧಿಕಾರಿ ದೇಶ್‌ರತನ್ ಗುಪ್ತ ಮತ್ತು ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.