ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆರಂಭವಾದ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶದ ಉದ್ಘಾಟನೆ ವೇಳೆ ಶಿವಕುಮಾರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಬೆಂಗಳೂರು: ‘ವೀರಶೈವ ಲಿಂಗಾಯತ ಸಮುದಾಯದ ಯುವಕರು ಕೇವಲ ಕೃಷಿಗೆ ಸೀಮಿತರಾಗದೇ, ಉದ್ಯಮ ವಲಯದಲ್ಲೂ ತೊಡಗಿಸಿಕೊಳ್ಳಬೇಕು’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸಲಹೆ ನೀಡಿದರು.
ಅಂತರರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಸೇರಿದಂತೆ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸವನ್ನು ವೀರಶೈವ ಲಿಂಗಾಯತ ಸಮುದಾಯ ಹೊಂದಿದೆ. ಗುಬ್ಬಿ ತೋಟದಪ್ಪ, ಸರ್ ಪುಟ್ಟಣ್ಣ ಚೆಟ್ಟಿ ಮೊದಲಾದವರು ಬಹಳ ಹಿಂದೆಯೇ ಉದ್ಯಮಶೀಲರಾಗಿ ಸಾಧನೆಗಳನ್ನು ಮಾಡಿ, ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಇದರಿಂದಲೇ ಸಮುದಾಯವು ವ್ಯಾಪಾರ ವಹಿವಾಟು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಯಶಸ್ಸು ಕಾಣುವುದು ಸಾಧ್ಯವಾಗಿದೆ’ ಎಂದರು.
‘ರಾಜ್ಯದ ಯಾವುದೇ ಭಾಗದಲ್ಲಾದರೂ ಕೈಗಾರಿಕಾ ಬೆಳವಣಿಗೆಗೆ ಸೂಕ್ತವಾದ ಪರಿಸರ ಇದೆ. ಸಮುದಾಯದ ಪ್ರತಿಭಾವಂತರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಈ ರೀತಿಯ ಸಮಾವೇಶಗಳನ್ನು ಸರ್ಕಾರವೂ ಪ್ರೋತ್ಸಾಹಿಸಲಿದೆ. ಇದರಿಂದ ಅಸ್ಮಿತೆ, ನೆಟ್‌ವರ್ಕಿಂಗ್ ಮತ್ತು ಹೂಡಿಕೆಗೆ ಇರುವ ಅವಕಾಶಗಳ ಮಾಹಿತಿ ಸಿಗಲಿದೆ’ ಎಂದು ಹೇಳಿದರು.
ಅರಣ್ಯ ಸಚಿವ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ವೀರಶೈವ ಲಿಂಗಾಯತ ಸಮುದಾಯದಲ್ಲೂ ಬಡವರಿದ್ದಾರೆ. ಪ್ರತಿಭಾವಂತರಿಗೆ ಅವಕಾಶ ಲಭಿಸುತ್ತಿಲ್ಲ. ಸಮುದಾಯವನ್ನು ಆರ್ಥಿಕವಾಗಿ ಬಲಪಡಿಸುವುದರ ಜತೆಗೆ ಎಲ್ಲ ಸಮುದಾಯವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಸಮಾವೇಶದಲ್ಲಿ 40 ಕೈಗಾರಿಕಾ ಮಳಿಗೆಗಳಿದ್ದು, ಉದಯೋನ್ಮುಖ ಉದ್ಯಮಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ’ ಎಂದರು.
ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಸದಸ್ಯ ರುದ್ರೇಗೌಡ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶೆಪ್ಪನವರ್, ಫೋರಂನ ಬೆಂಗಳೂರು ಘಟಕದ ಅಧ್ಯಕ್ಷ ಸಂತೋಷ್ ಕೆಂಚಾಂಬ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.