ADVERTISEMENT

ಟೌನ್‌ಶಿಪ್‌ ಯೋಜನೆ: ಭೂ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿ: ಎಸ್‌.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 5:32 IST
Last Updated 16 ಫೆಬ್ರುವರಿ 2022, 5:32 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಬೆಂಗಳೂರು: ‘ಟೌನ್‌ಶಿಪ್‌ಗಾಗಿ ಜಮೀನು ಖರೀದಿಸುತ್ತಿರುವುದಕ್ಕೆ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಿ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ಅವರು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹಾಗೂ ನೈಸ್‌ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

‘ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೆಮ್ಮಿಗೆಪುರ, ವರಾಹಸಂದ್ರ, ಕೆಂಗೇರಿ ಗೊಲ್ಲಹಳ್ಳಿ, ಬಡಾಮುನವಾರ್ತೆ ಕಾವಲ್‌, ದೇವಗೆರೆ, ಗುಡಿಮಾವು, ಕಂಬೀಪುರ, ಗಂಗಸಂದ್ರ, ಗೋಣಿಪುರ, ತಿಪ್ಪೂರು, ಸೀಗೇಹಳ್ಳಿ, ಕೊಡಿಯಾಲ ಕರೇನಹಳ್ಳಿ ಹಾಗೂ ದೊಡ್ಡಕುಂಟನಹಳ್ಳಿ ಗ್ರಾಮದ ರೈತರಿಂದನೈಸ್‌ ಕಂಪನಿ ಹಾಗೂ ಕೆಐಎಡಿಬಿ ಅಧಿಕಾರಿಗಳು ಅನಧಿಕೃತವಾಗಿ ಜಮೀನು ಖರೀದಿಸುತ್ತಿದ್ದಾರೆ. ಹಲವು ರೈತರಿಗೆ ಪರಿಹಾರಧನವನ್ನೇ ವಿತರಿಸಿಲ್ಲ. ಈ ಕುರಿತು ರೈತರು ಅಳಲು ತೋಡಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಮೂಲ ಒಪ್ಪಂದದಂತೆ ಯೋಜನೆ ಕೈಗೊಳ್ಳದೆರೈತರಿಂದ ಅಗತ್ಯಕ್ಕಿಂತಲೂ ಹೆಚ್ಚಿನ ಜಮೀನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಸುತ್ತ ಕಾಂಪೌಂಡ್‌ಗಳನ್ನೂ ನಿರ್ಮಿಸಲಾಗಿದೆ. ಹೀಗಾಗಿ ಅವರು ಟೌನ್‌ಶಿಪ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಖರೀದಿ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನೈಸ್‌ ಕಂಪನಿಯು ಟೌನ್‌ಶಿಪ್‌ ನಿರ್ಮಾಣ ವ್ಯಾ‍ಪ್ತಿಯಲ್ಲಿ ಬರುವ ಕೆರೆ–ಕಟ್ಟೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದೆ. ಸರ್ಕಾರ ಕೇಳಿರುವ ಮಾಹಿತಿಯನ್ನು ಕಂಪನಿಯು ಈವರೆಗೂ ನೀಡಿಲ್ಲ. ಜಂಟಿ ಸದನ ಸಮಿತಿಗೂ ಮಾಹಿತಿ ಹಾಗೂ ದಾಖಲೆ ಒದಗಿಸದೆ ಅವಮಾನ ಮಾಡಿದೆ. 26 ವರ್ಷಗಳಾದರೂ ಯೋಜನೆ ಪೂರ್ಣಗೊಳಿಸದೆ ಪೆರಿಫೆರಲ್‌ ರಸ್ತೆಯಿಂದ ದಿನಕ್ಕೆ ₹4 ಕೋಟಿ ವರಮಾನ ಗಳಿಸುತ್ತಿದೆ. ಆ ಮೂಲಕ ರೈತರ ಬದುಕನ್ನು ಮೂರಾಬಟ್ಟೆ ಮಾಡಿದೆ. ಯೋಜನೆ ಮುಗಿಯುವವರೆಗೂ ಟೋಲ್‌ ಸಂಗ್ರಹ ಮಾಡಬಾರದೆಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.