ಕೆ.ಆರ್.ಪುರ: ಬಿದರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನ ಮನೆಗೆ ಸೋಮವಾರ ಮಧ್ಯರಾತ್ರಿಯಲ್ಲಿ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನಾಲ್ಕು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಂಡಹಳ್ಳಿ ಗ್ರಾಮದಲ್ಲಿರುವ ಜಗನ್ನಾಥ್ ಅವರ ಮನೆಯ ಕಿಟಕಿಗಳ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಮನೆಯಲ್ಲಿದ್ದ ಜಗನ್ನಾಥ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಅಗ್ನಿ ದುರಂತದಿಂದ ಪಾರಾಗಿದ್ದಾರೆ.
ಸೋಮವಾರ ಮಧ್ಯೆ ರಾತ್ರಿ 1.30ರ ಸಮಯದಲ್ಲಿ ಕಿಡಿಗೇಡಿಗಳು ಸುಮಾರು 60 ಲೀಟರ್ ಪೆಟ್ರೋಲ್ ತಂದ್ದು, ಅದರಲ್ಲಿ 50 ಲೀಟರ್ ಪೆಟ್ರೋಲ್ ಅನ್ನು ಕಿಟಕಿಯ ಮೂಲಕ ಸುರಿದು ಬೆಂಕಿ ಹಚ್ಚಿದ್ದಾರೆ. 10 ಲೀಟರ್ ಪೆಟ್ರೋಲ್ ಇದ್ದ ಇನ್ನೊಂದು ಕ್ಯಾನ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಸ್ಪೋಟದ ರೀತಿಯಲ್ಲಿ ಭಾರಿ ಶಬ್ದ ಕೇಳಿಬಂದ ಕೆಲವೇ ನಿಮಿಷದಲ್ಲಿ ಬೆಂಕಿ ಮನೆಯನ್ನು ಆವರಿಸಿಕೊಂಡು, ಟಿವಿ, ಫ್ರಿಜ್, ಪೀಠೋಪಕರಣಗಳು, ದಾಖಲೆಗಳು, ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ.
‘ಮನೆಯಲ್ಲಿ ಶಬ್ದ ಹಾಗೂ ಬೆಂಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಮನೆಯ ಮಹಡಿಯಲ್ಲಿ ಮಲಗಿದ್ದ ನಮ್ಮ ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಬಾಗಿಲು ಒಡೆದು ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದರು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಜಗನಾಥ್ ತಿಳಿಸಿದರು.
ಮನೆಯಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಇಬ್ಬರು ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆವಲಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.