ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಆಟೊದಲ್ಲಿ ಬಿಟ್ಟು ಹೋಗಿದ್ದ ಏರ್‌ಪಾಡ್‌ಗಳನ್ನು ಚಾಲಕರೊಬ್ಬರ ನೆರವಿನೊಂದಿಗೆ ಮರಳಿ ಪಡೆಯುವಲ್ಲಿ ನಗರದ ಮಾರಾಟಗಾರ್ತಿ ಪಾಲಕ್ ಮಲ್ಹೋತ್ರಾ ಅವರು ಯಶಸ್ವಿಯಾಗಿದ್ದಾರೆ.
ಏರ್ ಪಾಡ್‌ಗಳು ಕಾಣೆಯಾಗಿರುವುದು ಮಲ್ಹೋತ್ರಾ ಅವರಿಗೆ ಹಲವು ದಿನಗಳ ಬಳಿಕ ಗೊತ್ತಾಗಿದೆ. ಮೊದಲು ಜಿಮ್ ಸೆಂಟರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಳಿಕ ರ್‍ಯಾಪಿಡೊ ಸಂಸ್ಥೆ ಮೂಲಕ ಆಟೊ ಚಾಲಕನನ್ನು ಸಂಪರ್ಕಿಸಿದರೂ ಅದರ ಸುಳಿವು ಸಿಗಲಿಲ್ಲ.
ಆ್ಯಪಲ್‌ನ ‘ಫೈಂಡ್ ಮೈ’ ಆ್ಯಪ್ ಮೂಲಕ ಏರ್ ಪಾಡ್‌ಗಳು ಎಚ್‌ಎಸ್‌ಆರ್ ಲೇಔಟ್ ಲೋಕೇಷನ್‌ನಲ್ಲಿ ಇರುವುದನ್ನು ಮಲ್ಹೋತ್ರಾ ಪತ್ತೆ ಮಾಡಿದರು.
‘ರ್‍ಯಾಪಿಡೊ ಮೂಲಕ ಆಟೊ ಬುಕ್ ಮಾಡಿ, ಚಾಲಕ ದರ್ಶನ್‌ಗೆ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಆತ ಸಹಾಯ ಮಾಡಲು ಒಪ್ಪಿಕೊಂಡ. ಏರ್‌ಪಾಡ್‌ಗಳ ಸಂಕೇತಗಳನ್ನು ಆಧರಿಸಿ ಮೂರು ಸ್ಥಳಗಳಿಗೆ ಕರೆದೊಯ್ದರು’ ಎಂದು ಮಲ್ಹೋತ್ರಾ ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಯಾಣಿಕರೊಬ್ಬರಿಗೆ ಏರ್‌ಪಾಡ್‌ಗಳು ಸಿಕ್ಕಿರುವುದು ಗೊತ್ತಾದ ಬಳಿಕ ಅವರನ್ನು ಪತ್ತೆ ಮಾಡಿ, ವಾಪಸ್ ನೀಡುವಂತೆ ಮನವಿ ಮಾಡಿದೆ. ಅವರು ಕೋಪಗೊಂಡು ನಿರಾಕರಿಸಿದರು. ಆಗ ದರ್ಶನ್ ಮಧ್ಯ ಪ್ರವೇಶಿಸಿ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ ಬಳಿಕ ವಾಪಸ್ ನೀಡಿದರು ಎಂದು ಹೇಳಿದ್ದಾರೆ.
ಏರ್‌ಪಾಡ್‌ಗಳನ್ನು ಪತ್ತೆ ಮಾಡಿದ ಅನುಭವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಪಾಲಕ್ ಮಲ್ಹೋತ್ರಾ, ‘ದರ್ಶನ್ ಬಿ.ಕಾಂ ಪದವೀಧರನಾಗಿದ್ದು, ಎಂಬಿಎ ವ್ಯಾಸಂಗಕ್ಕಾಗಿ ಹಣ ಗಳಿಸಲು ತನ್ನ ತಂದೆಯ ಆಟೊ ಓಡಿಸುತ್ತಿದ್ದಾರೆ. ₹20 ಸಾವಿರ ಬೆಲೆಯ ಏರ್‌ಪಾಡ್‌ಗಳನ್ನು ಪತ್ತೆ ಹಚ್ಚಲು ಸುಮಾರು ಒಂದೂವರೆ ತಾಸು ಆಟೊ ಓಡಿಸಿದರು’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರ್‍ಯಾಪಿಡೊ ಸಂಸ್ಥೆ, ‘ಹೃದಯಸ್ಪರ್ಶಿ ಕತೆಯನ್ನು ಹಂಚಿಕೊಂಡಿದಕ್ಕಾಗಿ ಧನ್ಯವಾದಗಳು. ದರ್ಶನ್ ಅವರ ಈ ಕಾರ್ಯಕ್ಕೆ ಬಹುಮಾನ ನೀಡುತ್ತೇವೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.