ADVERTISEMENT

ಮಿಷನ್ ಗನ್ ವದಂತಿ; ಹಾರದ ವಿಮಾನ

14 ತಾಸು ನಿಲ್ದಾಣದಲ್ಲೇ ಕಾದು ಸುಸ್ತಾದ 173 ಪ್ರಯಾಣಿಕರು!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:13 IST
Last Updated 23 ಏಪ್ರಿಲ್ 2019, 20:13 IST

ಬೆಂಗಳೂರು: ‘ವಿದೇಶಿ ಯುವಕನೊಬ್ಬನ ಗಿಟಾರ್ ಬ್ಯಾಗ್‌ನಲ್ಲಿ ಮಿಷನ್ ಗನ್ ಮಾದರಿಯ ವಸ್ತು ಕಾಣಿಸಿತು’ ಎಂದು ಪ್ರಯಾಣಿಕರೊಬ್ಬರು ಹೇಳಿದ್ದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿಯಿಡೀ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ, ಸಿಂಗಪುರಕ್ಕೆ ಹೊರಡಬೇಕಿದ್ದ 173 ಪ್ರಯಾಣಿಕರು 14 ತಾಸು ನಿಲ್ದಾಣದಲ್ಲೇ ಕಾದು ರೋಸಿ ಹೋದರು.

ಸ್ಕೂಟ್ ಏರ್‌ಲೈನ್ಸ್‌ನ ‘ಟಿಆರ್‌–573’ ವಿಮಾನ ಸೋಮವಾರ ರಾತ್ರಿ 1.20ಕ್ಕೆ ಕೆಐಎಎಲ್‌ನಿಂದ ಸಿಂಗಪುರಕ್ಕೆ ಹಾರಬೇಕಿತ್ತು. 28 ನಿಮಿಷ ತಡವಾಗಿ ರನ್‌ವೇಗೆ ಬಂದ ವಿಮಾನ, 173 ಪ್ರಯಾಣಿಕರೂ ಹತ್ತಿದ ಬಳಿಕ ಹೊರಡಲು ಸಜ್ಜಾಯಿತು. ಈ ಹಂತದಲ್ಲಿ ಪ್ರಯಾಣಿಕರೊಬ್ಬರು, ‘ನಿಲ್ದಾಣಕ್ಕೆ ಬಂದಿದ್ದ ವಿದೇಶಿ ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿ ಗನ್‌ ರೀತಿಯ ವಸ್ತು ಕಾಣಿಸಿತು. ಅವರು ಇದೇ ವಿಮಾನ ಹತ್ತಿರುವ ಸಂಶಯವಿದೆ. ಆ ವ್ಯಕ್ತಿಯ ಮುಖ ಸರಿಯಾಗಿ ನೆನಪಾಗುತ್ತಿಲ್ಲ’ ಎಂದು ಹೇಳಿದ್ದರು.

ಆ ಕೂಡಲೇ ಎಲ್ಲರನ್ನೂ ಕೆಳಗಿಳಿಸಿದ ಸಿಬ್ಬಂದಿ, ಭದ್ರತಾ ಕೊಠಡಿಗೆ ಮಾಹಿತಿ ರವಾನಿಸಿದರು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಅಧಿಕಾರಿಗಳು ಶ್ವಾನದಳದೊಂದಿಗೆ ದೌಡಾಯಿಸಿ ಎಲ್ಲರ ಲಗೇಜ್‌ಗಳನ್ನೂ ಪರಿಶೀಲಿಸಿದರು. ಆದರೆ, ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಲಿಲ್ಲ. ಆ ನಂತರ ಎಲ್ಲ ಪ್ರಯಾಣಿಕರನ್ನೂ ಪುನಃ ತಪಾಸಣೆಗೆ ಒಳಪಡಿಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬರೋಬ್ಬರಿ 14 ತಾಸು ಬೇಕಾಯಿತು.

ADVERTISEMENT

ತಡರಾತ್ರಿ 1.20ಕ್ಕೆ ಹೊರಡಬೇಕಿದ್ದ ವಿಮಾನ, ಮಂಗಳವಾರ ಮಧ್ಯಾಹ್ನ 3.30ಕ್ಕೆ ಹೊರಟಿತು. ರಾತ್ರಿಯಿಡೀ ನಿಲ್ದಾಣದಲ್ಲೇ ಕಳೆದ ಪ್ರಯಾಣಿಕರು, ಏರ್‌ಲೈನ್ಸ್ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಕೆಐಎಎಲ್ ಭದ್ರತಾ ಅಧಿಕಾರಿಗಳು ಹಾಗೂ ಪೊಲೀಸರು ಪ್ರಯಾಣಿಕರ ಮಧ್ಯಪ್ರವೇಶಿಸಿ ಮನವೊಲಿಸಿದ ನಂತರ ಪ್ರಯಾಣಿಕರು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.

‘ನಮಗೆ ಪ್ರಯಾಣಿಕರ ಸುರಕ್ಷತೆ ಮುಖ್ಯ. ಇಂತಹ ವಿಚಾರಗಳಲ್ಲಿ ದೂರುಗಳು ಬಂದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. 14 ತಾಸು ವ್ಯತ್ಯಯ ಉಂಟಾಗಿದ್ದರಿಂದ ಪ್ರಯಾಣಿಕರಿಗೆ ಊಟ–ತಿಂಡಿಯ ಜತೆಗೆ ವಿಶ್ರಾಂತಿ ಪಡೆಯುವುದಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದೆವು. ಈ ಅವಧಿಯಲ್ಲಿ ಬೇರೆ ಯಾವುದೇ ವಿಮಾನಗಳ ಹಾರಾಟಕ್ಕೆ ತೊಂದರೆ ಆಗಿಲ್ಲ’ ಎಂದು ಸ್ಕೂಟ್ ಏರ್‌ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಯಾರೂ ಮಾಹಿತಿ ಕೊಡುತ್ತಿಲ್ಲ

ಪ್ರಯಾಣಿಕರು ಏರ್‌ಲೈನ್ಸ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೊವನ್ನು ಕರೇಶ್ ಕುಮಾರ್ ಎಂಬುವರು ಫೇಸ್‌ಬುಕ್‌ಗೆ ಹಾಕಿದ್ದಾರೆ. ‘ಪೋಷಕರು ಹಾಗೂ ಅತ್ತಿಗೆ ಜೊತೆ ಸಿಂಗಪುರಕ್ಕೆ ಹೊರಟಿದ್ದೆ. ಇಡೀ ರಾತ್ರಿ ನಿಲ್ದಾಣದಲ್ಲೇ ಕೂರಬೇಕಾಗಿದೆ. ಏನಾಗುತ್ತಿದೆ? ಎಷ್ಟು ಗಂಟೆಗೆ ವಿಮಾನ ಹೊರಡುತ್ತದೆ ಎಂಬ ಬಗ್ಗೆ ಯಾರೂ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ತುರ್ತು ಕೆಲಸದ ನಿಮಿತ್ತ ಸಿಂಗಪುರಕ್ಕೆ ಹೊರಟಿದ್ದೆವು. 173 ಪ್ರಯಾಣಿಕರ ಲಗೇಜ್ ಪರಿಶೀಲಿಸಲು ಇಷ್ಟು ಹೊತ್ತು ಮಾಡಿದರು. ಮಕ್ಕಳನ್ನು, ಅನಾರೋಗ್ಯಪೀಡಿತ ಪೋಷಕರನ್ನು ಆರೈಕೆ ಮಾಡಿಕೊಂಡು ರಾತ್ರಿ ಜಾಗರಣೆ ಮಾಡಿದ್ದೇನೆ. ಮಧ್ಯಾಹ್ನವಾದರೂ ವಿಮಾನ ಹಾರುವ ಲಕ್ಷಣವೇ ಕಾಣುತ್ತಿಲ್ಲ’ ಎಂದು ಇನ್ನೊಬ್ಬರು ಅದೇ ವಿಡಿಯೊದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.