ADVERTISEMENT

ಮಿಟ್ಟಗಾನಹಳ್ಳಿ ಕಸ ಟೆಂಡರ್‌ನಲ್ಲಿ ಅಕ್ರಮ: ವಿಶ್ವನಾಥ್‌ ಆರೋಪ

ಎಸಿಬಿ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಪತ್ರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 23:31 IST
Last Updated 2 ಜನವರಿ 2020, 23:31 IST
ವಿಶ್ವನಾಥ್‌
ವಿಶ್ವನಾಥ್‌   

ಬೆಂಗಳೂರು: ಮಿಟ್ಟಗಾನಹಳ್ಳಿ ಕ್ವಾರಿಯ ಕಸ ಭೂಭರ್ತಿ ಕೇಂದ್ರದಲ್ಲಿ ವೈಜ್ಞಾನಿಕ ನಿರ್ವಹಣಾ ಘಟಕ ಸ್ಥಾಪನೆ ಸಲುವಾಗಿ ಬಿಬಿಎಂಪಿ ಕರೆದಿದ್ದ ಟೆಂಡರ್‌ ವಿರುದ್ಧ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಸ್‌.ಆರ್.ವಿಶ್ವನಾಥ್‌ ಧ್ವನಿ ಎತ್ತಿದ್ದಾರೆ.

ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ಟೆಂಡರ್‌ ಪ್ರಕ್ರಿಯೆಯನ್ನು ದುರುದ್ದೇಶದಿಂದ ವಿಳಂಬ ಮಾಡಿರುವ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ ಭ್ರಷ್ಟಾಚಾರ ದಳದಿಂದ (ಎಸಿಬಿ) ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಬಿಬಿಎಂಪಿಯ ಉನ್ನತಾಧಿಕಾರಿಗಳೂ ಭಾಗಿಯಾಗಿರುವ ಶಂಕೆ ಇದೆ. ತನಿಖೆ ಮೇಲೆ ಪ‍್ರಭಾವ ಬೀರದಂತೆ ತಡೆಯಲು ಉನ್ನತಾಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಬಿಬಿಎಂಪಿ ಕರೆದಿದ್ದ ಟೆಂಡರ್‌ನಲ್ಲಿ ಅನರ್ಹ ಗುತ್ತಿಗೆದಾರರನ್ನು ಆಯ್ಕೆ ಮಾಡಿರುವುದಕ್ಕೆ ನಗರಾಭಿವೃದ್ಧಿ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯನ್ನೇ ರದ್ದುಪಡಿಸಿರುವ ಇಲಾಖೆ ಮರು ಟೆಂಡರ್‌ ಕರೆಯುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಡಿಸೆಂಬರ್ 27ರಂದು ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ, ವಿಶ್ವನಾಥ್‌ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.

ADVERTISEMENT

ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ₹ 65.50 ಕೋಟಿ ವೆಚ್ಚದಲ್ಲಿ ಕಸ ಭೂಭರ್ತಿ ಕೇಂದ್ರದಲ್ಲಿ ವೈಜ್ಞಾನಿಕ ಕಾರ್ಯಾಚರಣೆ ಮತ್ತು ನಿರ್ವಹಣಾ ಘಟಕ ಸ್ಥಾಪಿಸಲು ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಪರಿಷ್ಕೃತ ಅಂದಾಜು ವೆಚ್ಚಕ್ಕೆ ಇಲಾಖೆ (₹ 65 ಕೋಟಿ) ಒಪ್ಪಿಗೆ ನೀಡಿತ್ತು.‌

‘ಸರ್ಕಾರಿ ಸಂಸ್ಥೆ ಅಥವಾ ಸ್ಥಳೀಯ ಸಂಸ್ಥೆಯಲ್ಲಿ ಭೂಭರ್ತಿ ಘಟಕದ ವೈಜ್ಞಾನಿಕ ವಿಲೇವಾರಿ ಮಾಡಿರುವ ಅನುಭವವನ್ನು ಬಿಡ್‌ದಾರರು ಹೊಂದಿರಬೇಕು ಎಂದು ಆರಂಭದಲ್ಲಿ ಷರತ್ತು ವಿಧಿಸಲಾಗಿತ್ತು. ಪ್ರಿ–ಬಿಡ್‌ ಸಭೆಯ ನಂತರ ಟೆಂಡರ್ ನಿಯಮಗಳನ್ನು ತಿದ್ದಿ ಖಾಸಗಿ ಸಂಸ್ಥೆಯಲ್ಲಿ ಕಸ ವಿಲೇವಾರಿ ಮಾಡಿರುವ ಅನುಭವ ಹೊಂದಿದ್ದರೆ ಸಾಕು ಎಂದು ಬದಲಿಸಲಾಗಿದೆ. ಈ ಮೂಲಕ, ನಕಲಿ ಪೂರ್ವಾನುಭವ ಪತ್ರಗಳನ್ನು ಒದಗಿಸಲು ವೇದಿಕೆ ಸಜ್ಜುಗೊಳಿಸಲಾಗಿದೆ. ಕಾಮಗಾರಿಗೆ ನಿಗದಿಪಡಿಸಿದ್ದ ಪೂರ್ವಾರ್ಹತೆ ಹೊಂದಿರದ ಗುತ್ತಿಗೆದಾರ ಪ್ರವೀಣ್ ಕುಮಾರ್‌ ಜಿ. (ಗೋರಂಟ್ಲ ಜಿಯೋಸಿಂಥೆಟಿಕ್ಸ್‌ ಸಂಸ್ಥೆ) ಎಂಬುವರ ಬಿಡ್‌ ಅನ್ನು ಅರ್ಹಗೊಳಿಸಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದು ಅಕ್ರಮ’ ಎಂದು ಅವರು ಹೇಳಿದ್ದಾರೆ.

‘ಈ ಕಾಮಗಾರಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು–2016ರ ಪ್ರಕಾರ ಅನುಷ್ಠಾನಗೊಳ್ಳಬೇಕಿದ್ದು, ಯೋಜನೆಯ ವಿಸ್ತೃತ ಯೋಜನಾ ವರದಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಮತಿ ಅಗತ್ಯವಿದೆ. ಆದರೆ, ಸಹಮತಿ ಪತ್ರ ಪಡೆಯದಿರುವುದು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾಗೂ ಅಕ್ರಮ ವ್ಯವಹಾರಕ್ಕೆ ನಿದರ್ಶನ. ನಿರಾತಂಕವಾಗಿ ಅಕ್ರಮ ಎಸಗುತ್ತಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಕಸ ವಿಲೇವಾರಿ ಗುತ್ತಿಗೆದಾರರ ಮಾಫಿಯಾವನ್ನು ಮಟ್ಟ ಹಾಕದೆ ಹೋದರೆ ಕಸ ವಿಲೇವಾರಿ ಸಮಸ್ಯೆ ಜೀವಂತವಾಗಿರುತ್ತದೆ. ಜತೆಗೆ, ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಾರೆ’ ಎಂದು ಅವರು ತಿಳಿಸಿದ್ದಾರೆ.

*
ಕಸ ನಿರ್ವಹಣೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ.
-ಎಸ್‌.ಆರ್‌.ವಿಶ್ವನಾಥ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.