ADVERTISEMENT

ನೆಹರೂ, ಗಾಂಧಿ ಹೋರಾಟಗಳನ್ನೇ ಸುಳ್ಳಾಗಿಸುವ ಪ್ರಯತ್ನಗಳಾಗುತ್ತಿವೆ: ರಮೇಶ್‌ಕುಮಾರ್‌

‘ರಂಗವನದ ಚಂದ್ರತಾರೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೆ.ಆರ್‌.ರಮೇಶ್‌ಕುಮಾರ್ ಭಾವುಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 2:51 IST
Last Updated 6 ಸೆಪ್ಟೆಂಬರ್ 2022, 2:51 IST
ನಗರದಲ್ಲಿ ಸೋಮವಾರ ನಡೆದ ಕಲಾ ಗಂಗೋತ್ರಿಯ 50ನೇ ವರ್ಷದ ರಂಗಹಬ್ಬದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅವರನ್ನು ಅಭಿನಂದಿಸಲಾಯಿತು.
ನಗರದಲ್ಲಿ ಸೋಮವಾರ ನಡೆದ ಕಲಾ ಗಂಗೋತ್ರಿಯ 50ನೇ ವರ್ಷದ ರಂಗಹಬ್ಬದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅವರನ್ನು ಅಭಿನಂದಿಸಲಾಯಿತು.   

ಬೆಂಗಳೂರು: ‘ಜವಾಹರಲಾಲ್‌ ನೆಹರೂ ಹಾಗೂ ಮಹಾತ್ಮ ಗಾಂಧಿ ಅವರ ಹೋರಾಟಗಳನ್ನೇ ಸುಳ್ಳಾಗಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ವಿಷಾದಿಸಿದರು.

ಸೋಮವಾರ ನಡೆದ ಕಲಾ ಗಂಗೋತ್ರಿಯ 50ನೇ ವರ್ಷದ ರಂಗಹಬ್ಬದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅವರು ರಚಿಸಿರುವ ತಮ್ಮ ಜೀವನ ಪಯಣದ ‘ರಂಗವನದ ಚಂದ್ರತಾರೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ರಾಜಕಾರಣಿಗಳು ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುತ್ತಿದ್ದರೂ ಜನರು ಮಾತ್ರ ನಿದ್ರಾವಸ್ಥೆಯಲ್ಲೇ ಇದ್ದಾರೆ’ ಎಂದು ಬೇಸರಿಸಿದರು.

‘ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಸುಧಾರಿಸಲು ಮುಂದಾಗಿದ್ದಕ್ಕೆ ನಾನೇ ಶತ್ರುವಾದೆ. ಯಾರೂ ನನ್ನ ಪರವಾಗಿ ಮಾತನಾಡಲಿಲ್ಲ. ಇದು ಲಜ್ಜೆಗೆಟ್ಟ ಸಮಾಜ. ನೋವು ವ್ಯಕ್ತಪಡಿಸುತ್ತಿಲ್ಲ. ಸ್ಪಂದಿಸುತ್ತಿಲ್ಲ. ಮಹಾತ್ಮ ಗಾಂಧಿಯನ್ನೇ ಹತ್ಯೆ ಮಾಡಿದ ಮೇಲೆ ಮತ್ತೇನು ಉಳಿದಿದೆ’ ಎಂದು ಹೇಳಿದರು.

ADVERTISEMENT

‘ಇಂದಿನ ಸ್ಥಿತಿಯಲ್ಲಿ ಹೃದಯಹೀನರದ್ದೇ ಮೇಲುಗೈಯಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿದಿವೆ. ಕಣ್ಣೆದುರಿಗೇ ಅಚಾರ್ತುಯಗಳು ಘಟಿಸಿದರೂ ಪ್ರಶ್ನಿಸುವ ಮನೋಭಾವ ಕಳೆದುಕೊಂಡಿದ್ದೇವೆ’ ಎಂದರು.

ಮೈಕ್ ಕಂಡರೆ ಭಯ: ‘ವಿಧಾನಸಭೆ ಸಭಾಪತಿಯಾಗಿದ್ದ ವೇಳೆ ಕಾನೂನು ಪಾಲಿಸಿದ್ದಕ್ಕೆ ಬಟ್ಟೆ ಒಗೆದಂತೆ ಜನರು ನನ್ನನ್ನು ಒಗೆದುಬಿಟ್ಟರು. ಜನರೂ ಸತ್ಯ ಹೇಳುವುದಕ್ಕೆ ಭಯ ಬೀಳುತ್ತಿದ್ದಾರೆ. ಸಾವಿರ ನಾಗರಹಾವುಗಳು ಬಂದರೂ ಹೆದರುವುದಿಲ್ಲ. ಮಾಧ್ಯಮಗಳ ಮೈಕ್‌ ಕಂಡರೆ ಭಯ’ ಎಂದರು.

ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಮಾತನಾಡಿ, ‘ಮುಖ್ಯಮಂತ್ರಿ’ ಚಂದ್ರು ಅವರು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಅನೇಕ ಪ್ರಯೋಗ ಮಾಡಿದ್ಧಾರೆ. ತಮ್ಮ ಕೃತಿಯಲ್ಲಿ ಯಾವುದನ್ನೂ ಬಚ್ಚಿಡದೇ ಎಲ್ಲ ವಿಚಾರವನ್ನೂ ದಾಖಲಿಸಿದ್ದಾರೆ’ ಎಂದು ಹೇಳಿದರು.ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್‌ ಅವರು ಮಾತನಾಡಿ, ‘ನಿಜವಾದ ಭಾರತದ ದರ್ಶನ ಆಗಬೇಕಿದ್ದರೆ ರೈಲಿನಲ್ಲಿ ಪ್ರಯಾಣ ಮಾಡಬೇಕು. ಅಲ್ಲಿ ಕಾಣುವ ಭಾರತ ಹಸಿವು, ಬಡತನದ್ದು’ ಎಂದು ವಿಷಾದಿಸಿದರು.

ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಅವರು ರಾಜಕೀಯ ಕ್ಷೇತ್ರವು ಹೊರಗಿನಿಂದ ಕಾಣಲು ಚೆನ್ನಾಗಿದೆ. ಒಳಗಿನ ವ್ಯವಸ್ಥೆ ಅಸಹ್ಯ ಹುಟ್ಟಿಸುತ್ತಿದೆ ಎಂದು ಹೇಳಿದರು. ಆಮ್‌ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ, ‘ಮುಖ್ಯಮಂತ್ರಿ’ ಚಂದ್ರು, ದೆಹಲಿ ಶಾಸಕ ದಿಲೀಪ್‌ ಪಾಂಡೆ, ಡಾ.ಬಿ.ವಿ.ರಾಜಾರಾಂ ಅವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.