ADVERTISEMENT

ಕಾರ್ಯಕರ್ತನ ಕಾರು ತಡೆಯದಂತೆ ಶಾಸಕ ರಾಮಪ್ಪ ಲಮಾಣಿಯಿಂದ ಪೊಲೀಸರಿಗೆ ಶಿಫಾರಸು!

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಪತ್ರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 13:17 IST
Last Updated 12 ಜುಲೈ 2022, 13:17 IST
ರಾಮಪ್ಪ ಲಮಾಣಿ ಬರೆದ ಪತ್ರ
ರಾಮಪ್ಪ ಲಮಾಣಿ ಬರೆದ ಪತ್ರ    

ಬೆಂಗಳೂರು: ತಮ್ಮ ಕಾರ್ಯಕರ್ತನ ಕಾರು ತಡೆಯದಂತೆ ಪೊಲೀಸರಿಗೆ ಸೂಚನೆ ನೀಡಿ ಶಾಸಕ ರಾಮಪ್ಪ ಎಸ್‌. ಲಮಾಣಿ ಶಿಫಾರಸು ಪತ್ರ ನೀಡಿದ್ದಾರೆ ಎನ್ನಲಾಗುತ್ತಿದ್ದು, ಇದರ ಪ್ರತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಪ್ಪ ಎಸ್‌. ಲಮಾಣಿ ಹೆಸರಿನ ಲೆಟರ್‌ ಹೆಡ್‌ನಲ್ಲಿ ಶಿಫಾರಸು ಪತ್ರವಿದೆ. ಜೊತೆಗೆ, ಸಹಿ ಹಾಕಲಾಗಿದೆ. ಈ ಪತ್ರವನ್ನು ಫೇಸ್‌ಬುಕ್‌, ಟ್ವಿಟರ್‌ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಹಲವರು ಹಂಚಿಕೊಳ್ಳುತ್ತಿದ್ದಾರೆ.

‘ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಶಾಸಕ, ಒಬ್ಬ ಕಾರ್ಯಕರ್ತನಿಗಾಗಿ ಶಿಫಾರಸು ಪತ್ರದ ಮೂಲಕ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಶಾಸಕರ ಈ ವರ್ತನೆ ಖಂಡನೀಯ’ ಎಂದು ಹಲವರು ಬರೆದುಕೊಂಡಿದ್ದಾರೆ.

ADVERTISEMENT

ಶಿಫಾರಸು ಪತ್ರದ ವಿವರ: ‘ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳಗಟ್ಟಿ ಗ್ರಾಮದ ಜಿ. ಬಸವರಾಜ ನನ್ನ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಇವರು ನಮ್ಮ ಪಕ್ಷದ ಕಾರ್ಯಕರ್ತ ಮತ್ತು ನನಗೆ ಚಿರಪರಿಚಿತ. ಇವರು ಮಹೇಂದ್ರ ಬೊಲೆರೊ ವಾಹನ (ಎಪಿ 39 ವಿ 3517) ಹೊಂದಿದ್ದಾರೆ. ಈ ವಾಹನವನ್ನು ಹಿಡಿಯಬಾರದು ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದೆಂದು ಈ ಮೂಲಕ ನಾನು ಬರೆದುಕೊಡುವ ಪತ್ರ’ ಎಂದೂ ನಮೂದಿಸಲಾಗಿದೆ.

ಪತ್ರದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶಾಸಕ ರಾಮಪ್ಪ ಲಮಾಣಿ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.