
ಬೆಂಗಳೂರು: ‘ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಮೌಲ್ಯ ನಿರ್ಣಯ ಮಂಡಳಿ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಂಕಷ್ಟವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿಧಾನದಲ್ಲಿ ವೈಜ್ಞಾನಿಕವಾಗಿ ಸುಧಾರಣೆ ತರಬೇಕು’ ಎಂದು ಒತ್ತಾಯಿಸಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
‘ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇಕಡ 83 ರಿಂದ ಶೇ 53ಕ್ಕೆ ಕುಸಿದಿದೆ. ಪರೀಕ್ಷಾ ವಿಧಾನದಲ್ಲಿ ದಿಢೀರ್ ಬದಲಾವಣೆಯು ಒಂದು ಇಡೀ ಪೀಳಿಗೆಯ ಮನೋಸ್ಥೈರ್ಯವನ್ನು ಕಂಗೆಡಿಸುವ ಸಂಗತಿ. ಇಂತಹ ಬದಲಾವಣೆಗೂ ಮುನ್ನ ಸಮಗ್ರ ಆಲೋಚನೆ ಇರಬೇಕಾಗಿತ್ತು. ಪರೀಕ್ಷೆಯಲ್ಲಿ ಬದಲಾವಣೆ ತಂದು, ನಂತರ ಕೃಪಾಂಕ ನೀಡಿ 1.79 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾಡಿರುವುದು ಆಡಳಿತ ವ್ಯವಸ್ಥೆಯ ಲೋಪದೋಷ ಮತ್ತು ನೀತಿ ನಿರೂಪಕರು ಜವಾಬ್ದಾರಿ ರಹಿತರಂತೆ ವರ್ತಿಸಿರುವುದನ್ನು ಬಯಲು ಮಾಡಿದೆ’ ಎಂದು ಪತ್ರದಲ್ಲಿ ಟೀಕಿಸಿದ್ದಾರೆ.
‘ಪರೀಕ್ಷಾ ಸುಧಾರಣೆಗೂ ಮೊದಲು ಬೋಧನಾ ಕ್ರಮದಲ್ಲಿ ಸುಧಾರಣೆ ತರಬೇಕಿತ್ತು. ಜಗತ್ತಿನ ವಿವಿಧೆಡೆ ಪರೀಕ್ಷಾ ಕೇಂದ್ರಿತ ಶಿಕ್ಷಣ ಕ್ರಮ ದೂರವಾಗುತ್ತಿದೆ. ಮಕ್ಕಳ ಕಲಿಕೆಯ ಮಾನದಂಡ ಕೇವಲ ಪರೀಕ್ಷೆಯಲ್ಲ ಎಂಬುದು ವೈಜ್ಞಾನಿಕವಾಗಿಯೂ ಅರ್ಥವಾಗುತ್ತಿದೆ’ ಎಂದಿದ್ದಾರೆ.
‘ಸರ್ಕಾರ ಈ ಕುರಿತು ವಸ್ತುನಿಷ್ಠವಾಗಿ ಆಲೋಚಿಸಬೇಕು. ಪರೀಕ್ಷೆಯ ನೆಪದಲ್ಲಿ ಮಕ್ಕಳ ಮೇಲೆ ಹಿಂಸೆಯನ್ನು ಹೇರಬಾರದು. ಮಕ್ಕಳ ಕುರಿತು ಸಹಾನುಭೂತಿಯ ನಿಲುವು ಅಗತ್ಯ. ಈ ಕುರಿತು ಸಂಬಂಧಿಸಿದವರಿಗೆ ನೀವು ಸೂಕ್ತ ಮತ್ತು ಕಠಿಣ ನಿರ್ದೇಶನಗಳನ್ನು ನೀಡಬೇಕು. ಆಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ’ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.