ADVERTISEMENT

ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಗಲಭೆ: ಜಮೀರ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 19:42 IST
Last Updated 11 ಏಪ್ರಿಲ್ 2022, 19:42 IST
ಜಮೀರ್ ಅಹ್ಮದ್‌ ಖಾನ್‌
ಜಮೀರ್ ಅಹ್ಮದ್‌ ಖಾನ್‌   

ಬೆಂಗಳೂರು: ‘ನಾವು ಪಾಕಿಸ್ತಾನದ ಮುಸ್ಲಿಮರಲ್ಲ, ಭಾರತೀಯ ಮುಸ್ಲಿಮರು. ಶಾಂತಿ ಸಹಬಾಳ್ವೆಗೆ ನಮ್ಮ ಮೊದಲ ಆದ್ಯತೆ. ನಾವು ಬಹಳ ಗೌರವದಿಂದ ಭಾರತದಲ್ಲಿ ಬಾಳುತ್ತಿದ್ದೇವೆ. ಮುಂದೆಯೂ ಗೌರವಯುತವಾಗಿ ಇರುತ್ತೇವೆ’ ಎಂದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್‌ ಖಾನ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚಿಗೆ ನಡೆದ ಕೆಲವು ಬೆಳವಣಿಗೆಗಳ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಸಾವಿನ ಮನೆಯಲ್ಲಿಯೂ ಬಿಜೆಪಿ ರಾಜಕೀಯ ಮಾಡುತ್ತಿದೆ’ ಎಂದು ದೂರಿದ್ದಾರೆ.

‘ನಾನು ಶಾಸಕನಾದ ಚಾಮರಾಜಪೇಟೆ ಕ್ಷೇತ್ರದಲ್ಲಿ ಶಾಂತಿ ನೆಲೆಸಿದೆ. ಇಲ್ಲಿ ಗಲಭೆ ಸೃಷ್ಟಿಸಲೇ ಬೇಕೆಂದು ಬಿಜೆಪಿ ಮುಖಂಡರು ಯತ್ನಿಸುತ್ತಿದ್ದಾರೆ. ಆದರೆ, ಶಾಂತಿ ಕದಡಲು ನಾನು ಅವಕಾಶ ಮಾಡಿಕೊಡುವುದಿಲ್ಲ’ ಎಂದಿರುವ ಅವರು, ‘ಜೆಜೆ ನಗರದಲ್ಲಿ ನಡೆದ ಚಂದ್ರಶೇಖರ ಹತ್ಯೆ ಪ್ರಕರಣದ ಆರೋಪಿಗಳಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ.ಈ ಕೊಲೆಯ ಆರೋಪಿ ಚಿಕ್ಕವಯಸ್ಸಿನಿಂದಲೇ ಚಾಕು ಇಟ್ಟುಕೊಂಡು ಓಡಾಡುವುದನ್ನು ರೂಢಿಸಿಕೊಂಡಿದ್ದ’ ಎಂದರು.

ADVERTISEMENT

‘ತೊಡೆಗೆ ಚಾಕು ಹಾಕಿದ್ದರಿಂದ ನರ ತುಂಡಾಗಿದೆ. ರಕ್ತಸ್ರಾವ ನಿಲ್ಲದ ಕಾರಣ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ, ಬಿಜೆಪಿಯವರು ಶವ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಯಾವುದಾದರೂ ಗಲಾಟೆಯಲ್ಲಿ ರಾಜಕಾರಣಿ ಸತ್ತಿದ್ದಾರಾ’ ಎಂದು ಪ್ರಶ್ನಿಸಿರುವ ಜಮೀರ್‌, ‘ಜನರಿಂದ ಆಯ್ಕೆಯಾದ ಸರ್ಕಾರದಲ್ಲಿ ಗಲಭೆ ಇಲ್ಲ. ತಮಿಳುನಾಡಿನಲ್ಲಿ ಹಿಜಾಬ್ ಗಲಾಟೆ ಇಲ್ಲ. ಆದರೆ, ಇಲ್ಲಿ ರಾಜಕೀಯ ಲಾಭಕ್ಕಾಗಿ ಗಲಭೆ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

‘ತಾವೇ ನೇಮಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂತ್ ಮೇಲೆ ಬಿಜೆಪಿಯವರು ಬೆರಳು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯವರ ಕೀಳುಮಟ್ಟದ ಹೇಳಿಕೆಯಿಂದ ಸತ್ಯ ಎಂದಿಗೂ ಸುಳ್ಳಾಗದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.