ಬೆಂಗಳೂರು: ಇದ್ದಕ್ಕಿದ್ದಂತೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿತು. ದೇಹದ ಉಷ್ಣತೆ 103 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಎದೆ ಭಾಗದ ಎಕ್ಸ್‌ರೇ, ಸಿಟಿ ಸ್ಕ್ಯಾನ್ ಮಾಡಿಸಿಕೊಂಡೆ. ಜೊತೆಗೆ ಪತ್ನಿಯಲ್ಲೂ (ಸುಜಾತಾ ರಾಠೋಡ್, ಮಿಂಟೋ ಆಸ್ಪತ್ರೆಯ ನಿರ್ದೇಶಕಿ) ರೋಗಲಕ್ಷಣಗಳು ಕಾಣಿಸಿಕೊಂಡಿತ್ತು. ಆಗ ಭಯ ಆಗಿದ್ದು ನಿಜ.
ಅಷ್ಟಕ್ಕೂ ನಾನು ಮೊದಲೇ ಹೃದ್ರೋಗಿ, ಬೈ ಪಾಸ್ ಸರ್ಜರಿ ಕೂಡ ಆಗಿದೆ. ಸೋಂಕು ಶ್ವಾಸಕೋಶವನ್ನೇ ಬಾಧಿಸುತ್ತದೆ ಎಂಬ ಮಾಹಿತಿಯಿಂದ ಗಾಬರಿ ಆಗಿತ್ತು. ಆದರೆ, ನನ್ನ ಮತ್ತು ಪತ್ನಿಯ ಅದೃಷ್ಟವೆಂದರೆ, ಪರೀಕ್ಷಾ ವರದಿಯಲ್ಲಿ ಗಂಭೀರವಾದ ಯಾವುದೇ ಸಮಸ್ಯೆ ಇರಲಿಲ್ಲ. ಹೀಗಾಗಿ, ರೆಮ್‌ಡಿಸಿವಿರ್ ಚುಚ್ಚುಮದ್ದು ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬರಲಿಲ್ಲ. ಇಬ್ಬರೂ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದೆವು.
ಆದರೆ, ನನ್ನ ಸ್ನೇಹಿತರು, ಆಪ್ತರು ಹಲವರು ಕೋವಿಡ್‌ನಿಂದ ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿತ್ತು. ಹಲವರು ಇನ್ನೂ ಗಂಭೀರಾವಸ್ಥೆಯಲ್ಲಿದ್ದಾರೆ. ಹೀಗಾಗಿ, ಆಗೊಮ್ಮೆ, ಹೀಗೊಮ್ಮೆ ಮಾನಸಿಕವಾಗಿ ಭಯ ಆಗುತ್ತಿತ್ತು. ಆದರೂ ಧೈರ್ಯ ಕಳೆದುಕೊಳ್ಳಲಿಲ್ಲ. ಕುಟುಂಬದ ವೈದ್ಯರೇ ಆಗಿರುವ ಸತೀಶ ನಾಯಕ್ ಮತ್ತು ಹೃದ್ರೋಗ ತಜ್ಞ ಜಯರಂಗರಾಥ್ ಅವರಿಂದ ಸಲಹೆ ಪಡೆದವು. 4–5 ದಿನಗಳಲ್ಲಿಯೇ ರೋಗಲಕ್ಷಣ ಕಡಿಮೆ ಆಯಿತು. ಮನೆಯಲ್ಲೇ ವೈದ್ಯರು (ಪತ್ನಿ) ಇದ್ದದ್ದು ಅನುಕೂಲ ಆಯಿತು. ಆಮ್ಲಜನಕ ಸ್ಯಾಚುರೇಷನ್ 93–94 ರಿಂದ ಕೆಳಗೆ ಬಂದಿರಲಿಲ್ಲ. ಈಗ ಮತ್ತೆ 98ಕ್ಕೆ ಬಂದಿದೆ. ಇನ್ನೂ 3–4 ದಿನಗಳಲ್ಲಿ ಕ್ವಾರಂಟೈನ್ ಅವಧಿ ಮುಗಿಯುತ್ತದೆ. ನಂತರ ಹೊರಗಡೆ ಅಡ್ಡಾಡಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕೋವಿಡ್ ರೋಗಲಕ್ಷಣ ಕಾಣಿಸಿಕೊಂಡ ತಕ್ಷಣ ಆತಂಕಗೊಳ್ಳುವ ಅಗತ್ಯ ಇಲ್ಲ. ವೈದ್ಯರ ಸಲಹೆ ಪಡೆದುಕೊಂಡು ಅದರಂತೆ ಮುಂದುವರಿಯಬೇಕು. ಈಗಂತೂ ಹಾಸಿಗೆ, ಆಮ್ಲಜನಕ ಕೊರತೆ ಇದೆ. ರೋಗ ಬಹಳ ವೇಗವಾಗಿ ಹರಡುತ್ತಿದೆ. ಹೀಗಾಗಿ, ಮನೆಯಲ್ಲೇ ಇದ್ದು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಅವಶ್ಯಕತೆ ಇಲ್ಲದೇ ಇದ್ದರೆ ಹೊರಗಡೆ ಹೋಗಲೇ ಬಾರದು. ಹೊರಗಡೆ ಹೋಗುವುದಾದರೆ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಇದೀಗ, ಸೋಂಕಿನ ಸರಪಳಿ ಮುರಿಯಲು ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ಎಲ್ಲರೂ ನಿಯಮ ಪಾಲಿಸಲೇಬೇಕು.
ಹಾಗೆ ನೋಡಿದರೆ, ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸೂಕ್ತ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಹೀಗಾಗಿ, ನಿಭಾಯಿಸಲು ವಿಫಲವಾಗಿದೆ. ಸರ್ಕಾರ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಗತ್ಯ ಇರುವವರಿಗೆ ಹಾಸಿಗೆ, ಆಮ್ಲಜನಕ ಸೌಲಭ್ಯದ ಹಾಸಿಗೆ ಕುರಿತು ಮಾಹಿತಿಯೇ ಸಿಗುತ್ತಿಲ್ಲ. ನನಗೂ ನಿತ್ಯ ಹಲವರು ಕರೆ ಮಾಡುತ್ತಿದ್ದಾರೆ. ಸಾಧ್ಯವಾದಷ್ಟು ನೆರವಾಗುತ್ತಿದ್ದೇನೆ.
-ಪ್ರಕಾಶ್ ರಾಠೋಡ್, ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.