ADVERTISEMENT

ಪ್ರಾಣಕ್ಕೆ ಕುತ್ತು ತರುತ್ತಿರುವ ಮೊಬೈಲ್‌ ಗೀಳು: ಸಚಿವ ಶಿವರಾಜ ತಂಗಡಗಿ

ಕಲಾ ಪ್ರತಿಭೋತ್ಸವ ಉದ್ಘಾಟಿಸಿದ ಸಚಿವ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 14:35 IST
Last Updated 13 ಫೆಬ್ರುವರಿ 2026, 14:35 IST
ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಯಮುನಾ ಶ್ರೀನಿಧಿ ಡೊಳ್ಳು ಬಾರಿಸಿದರು. ಪುರುಷೋತ್ತಮ ಬಿಳಿಮಲೆ, ಮಾನಸ, ಶಿವರಾಜ ಎಸ್. ತಂಗಡಗಿ, ಕೆ.ವಿ. ನಾಗರಾಜಮೂರ್ತಿ, ಶುಭಾ ಧನಂಜಯ ಹಾಜರಿದ್ದರು ಪ್ರಜಾವಾಣಿ ಚಿತ್ರ
ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಯಮುನಾ ಶ್ರೀನಿಧಿ ಡೊಳ್ಳು ಬಾರಿಸಿದರು. ಪುರುಷೋತ್ತಮ ಬಿಳಿಮಲೆ, ಮಾನಸ, ಶಿವರಾಜ ಎಸ್. ತಂಗಡಗಿ, ಕೆ.ವಿ. ನಾಗರಾಜಮೂರ್ತಿ, ಶುಭಾ ಧನಂಜಯ ಹಾಜರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೊಬೈಲ್‌ ಗೀಳು ಮಕ್ಕಳ ಪ್ರಾಣಕ್ಕೆ ಕುತ್ತು ತರುವ ಹಂತ ತಲುಪಿದೆ. ಮಕ್ಕಳನ್ನು ಮೊಬೈಲ್‌ನಿಂದ ದೂರ ಇರಿಸಿ ಕ್ರೀಡೆ, ಸಂಗೀತ, ಕಲೆ, ನಾಟಕ ಇನ್ನಿತರ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದರೆ ಸಮಸ್ಯೆ ನಿವಾರಿಸಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌. ತಂಗಡಗಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ‘ಕಲಾ ಪ್ರತಿಭೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮೊಬೈಲೇ ಎಲ್ಲವೂ ಆಗಿದೆ. ಮೊಬೈಲ್‌ ವಿಡಿಯೊ ಗೇಮ್ಸ್‌ ಮಕ್ಕಳನ್ನು ಸಾವಿನೆಡೆಗೆ ಒಯ್ಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಅಂಕದ ಜ್ಞಾನಕ್ಕೆ ಸೀಮಿತವಾದರೆ, ಲೋಕಜ್ಞಾನ ಸಿಗುವುದಿಲ್ಲ. ಮಕ್ಕಳನ್ನು ಹೊರಬಿಡದೇ ಇರುವುದರಿಂದ ಅವರು ಅಂಕಕ್ಕಾಗಿ ಓದುತ್ತಾರೆ. ಅದು ಬಿಟ್ಟರೆ ಮೊಬೈಲ್‌ಗೆ ಸೀಮಿತರಾಗುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಮಕ್ಕಳ ಬೆಳವಣಿಗೆಗೆ ದೇಶ ಎಷ್ಟು ಆದ್ಯತೆ ನೀಡುತ್ತಿದೆ ಎಂಬುದನ್ನು ಗಮನಿಸಿದರೆ ದೇಶದ ಸಂವೇದನೆ ಗುರುತಿಸಲು ಸಾಧ್ಯ. ನಮ್ಮಲ್ಲಿ ಮಕ್ಕಳು, ಮಕ್ಕಳ ಸಾಹಿತ್ಯ ಹಾಗೂ ರಂಗಭೂಮಿಯನ್ನು ಕಡೆಗಣಿಸಲಾಗಿದೆ’ ಎಂದು ವಿಷಾದಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಕಲೆಯನ್ನು ನಾನು ಮತ್ತು ಕಲೆ ಎಂದು ವಿಭಾಗಿಸದೇ ಪ್ರದರ್ಶನ ಕಲೆಯಲ್ಲಿ ನಾವಿರುತ್ತೇವೆ ಎಂದು ನೋಡಬೇಕು. ಮಹಾಭಾರತದಲ್ಲಿ ತನ್ನ ಅಜ್ಜನ, ತಂದೆಯ ಕಥೆಯನ್ನು ತಾನೇ ಕೇಳುವ, ವಾಲ್ಮೀಕಿ ತನ್ನ ಕಾವ್ಯಕ್ಕೆ ತಾನೇ ಸಾಕ್ಷಿಯಾಗುವ, ರಾಮಾಯಣದಲ್ಲಿ ರಾಮ ತನ್ನ ಮಕ್ಕಳ ಮೂಲಕ ತನ್ನ ಕಥೆಯನ್ನೇ ಕೇಳುವ ಕಲೆಗಾರಿಕೆ ಭಾರತಕ್ಕೆ ಅತ್ಯುತ್ತಮವಾದ ರೂಪಕ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ, ನಟಿ ಯಮುನಾ ಶ್ರೀನಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸಂಗೀತ ನೃತ್ಯ ಅಕಾಡೆಮಿ‌ ಅಧ್ಯಕ್ಷೆ ಶುಭಾ ಧನಂಜಯ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕಲಾವಿದ ಪ.ಸ. ಕುಮಾರ್ ಉಪಸ್ಥಿತರಿದ್ದರು.

ಸ್ಪರ್ಧೆಗೆ ನಗದು ಬಹುಮಾನ

‘ಹದಿನೈದು ವರ್ಷಗಳಿಂದ ನಡೆಯದ ಕಲಾ ಪ್ರತಿಭೋತ್ಸವವನ್ನು ಮತ್ತೆ ಆರಂಭಿಸಲಾಗಿದೆ. ಇಂತಹ ಸ್ಪರ್ಧೆಗಳು ಮಕ್ಕಳ ಪ್ರತಿಭೆ ಅರಳಲು ಕಾರಣವಾಗುವುದರ ಜೊತೆಗೆ ಧೈರ್ಯವನ್ನು ತುಂಬುತ್ತವೆ. ಏಕವ್ಯಕ್ತಿ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ₹15 ಸಾವಿರ ₹10 ಸಾವಿರ ₹7500 ಹಾಗೂ ಸಮೂಹ ಪ್ರಕಾರದ ನಾಟಕ ಸ್ಪರ್ಧೆಯ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹50 ಸಾವಿರ ₹40 ಸಾವಿರ ಹಾಗೂ ₹30 ಸಾವಿರ ನೀಡುತ್ತಿದ್ದೇವೆ. ಇಲ್ಲಿ ಹಣ ಮುಖ್ಯವಲ್ಲ. ಪ್ರತಿಭೆ ಗುರುತಿಸುವುದು ಮುಖ್ಯ’ ಎಂದು ಸಚಿವ ಶಿವರಾಜ ಎಸ್‌. ತಂಗಡಗಿ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.