ಸ್ಫೋಟ
ಬೆಂಗಳೂರು: ಮೊಬೈಲ್ ಸ್ಫೋಟದಿಂದಾಗಿ ಗಂಭೀರ ಗಾಯಗೊಂಡಿದ್ದ ನಗರದ 19 ವರ್ಷದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಸ್ಪರ್ಶ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
‘ಮನೆಯಲ್ಲಿ ಮೊಬೈಲ್ ವೀಕ್ಷಿಸುತ್ತಿದ್ದ ವೇಳೆ ಯುವಕನ ಮೊಬೈಲ್ ಸ್ಫೋಟಗೊಂಡಿತ್ತು. ಮುಖ ಹಾಗೂ ಬಲ ಕೈಗೆ ಗಾಯವಾಗಿ, ಪ್ರಜ್ಞೆ ತಪ್ಪಿದ್ದ ಆತನನ್ನು ಇನ್‌ಫೆಂಟ್ರಿ ರಸ್ತೆಯ ಸ್ಪರ್ಶ್ ಆಸ್ಪತ್ರೆಗೆ ಕರೆತರಲಾಗಿತ್ತು. ಮಧುಮೇಹ ಸಮಸ್ಯೆಯನ್ನೂ ಎದುರಿಸುತ್ತಿದ್ದ ಕಾರಣ, ಆತ ಗಂಭೀರ ಸ್ಥಿತಿಗೆ ತಲುಪಿದ್ದ. ವೈದ್ಯರ ತಂಡ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ, ಚಿಕಿತ್ಸೆ ಒದಗಿಸಿತು’ ಎಂದು ಆಸ್ಪತ್ರೆ ತಿಳಿಸಿದೆ.
‘ಮೊಬೈಲ್ ಸ್ಫೋಟದಿಂದ ಸುಟ್ಟ ಗಾಯಗಳ ಜತೆಗೆ ಶ್ವಾಸಕೋಶಕ್ಕೂ ತೀವ್ರ ತರದ ಹಾನಿಯಾಗಿತ್ತು. ಮಧುಮೇಹದಿಂದಾಗಿ ಚಯಾಪಚಯ ಪ್ರಕ್ರಿಯೆಗೆ ತೊಂದರೆ ಉಂಟಾಗಿತ್ತು. ಮಧುಮೇಹ ಇರುವುದರಿಂದ ದೇಹದ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಮೊದಲೇ ಖಚಿತಪಡಿಸಿಕೊಂಡು, ಸೂಕ್ತ ಚಿಕಿತ್ಸಾ ಕ್ರಮ ಅನುಸರಿಸಲಾಯಿತು. ಇದರಿಂದ ಬಹುಅಂಗಾಂಗ ವೈಫಲ್ಯ ತಪ್ಪಿಸಲು ಸಾಧ್ಯವಾಯಿತು’ ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಹೇಮಂತ್ ಎಚ್.ಆರ್. ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.