ಬೆಂಗಳೂರು: ಆನ್‌ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಮೊಬೈಲ್ ಬುಕ್ಕಿಂಗ್ ಮಾಡಿ ಡೆಲಿವರಿ ಸಮಯದಲ್ಲಿ ಬಾಕ್ಸ್ ಸಮೇತ ಮೊಬೈಲ್ ಕದ್ದು, ಕಲ್ಲು ಇರುತ್ತಿದ್ದ ಬಾಕ್ಸ್ ವಾಪಸ್ ಕೊಟ್ಟು ವಂಚಿಸುತ್ತಿದ್ದ ಮೂವರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
‘ಮಹಾರಾಷ್ಟ್ರದ ಸುನೇಶ್, ರಾಜಸ್ಥಾನದ ದೀಪಕ್ ಚೌಧರಿ, ಬಿಹಾರದ ರಾಬಿನ್ ಸನ್ ಬಂಧಿತರು. ಮೂವರು ಸೇರಿಕೊಂಡು ಸಾವಿರಾರು ರೂಪಾಯಿ ಬೆಲೆಯ 11 ಮೊಬೈಲ್‌ಗಳನ್ನು ಕದ್ದಿರುವ ಮಾಹಿತಿ ಇದ್ದು, ಅವುಗಳನ್ನು ಜಪ್ತಿ ಮಾಡಬೇಕಿದೆ’ ಎಂದು ಪೊಲೀಸರು ಹೇಳಿದರು.
‘ಕೆಲ ವರ್ಷಗಳ ಹಿಂದೆ ಸುನೇಶ್, ಕೆಲಸ ನಿಮಿತ್ತ ಮೈಸೂರಿಗೆ ಬಂದಿದ್ದ. ಆತನಿಗೆ ದೀಪಕ್ ಹಾಗೂ ರಾಬಿನ್ ಪರಿಚಯವಾಗಿತ್ತು. ಇತ್ತೀಚೆಗೆ ಮೂವರು ಬೆಂಗಳೂರಿಗೆ ಬಂದು, ಆನ್‌ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಮೊಬೈಲ್ ಬುಕ್ಕಿಂಗ್ ಮಾಡಿ ವಂಚಿಸಲಾರಂಭಿಸಿದ್ದರು. ಈ ಬಗ್ಗೆ ಅವರೇ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.
ಯಾರದ್ದೂ ಹೆಸರಿನಲ್ಲಿ ಬುಕ್ಕಿಂಗ್: ‘ಫ್ಲಿಪ್‌ಕಾರ್ಟ್’, ‘ಅಮೆಜಾನ್’ ಸೇರಿದಂತೆ ಹಲವು ಜಾಲತಾಣಗಳಲ್ಲಿ ದುಬಾರಿ ಬೆಲೆಯ ಮೊಬೈಲ್‌ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಆರೋಪಿಗಳು ಬುಕ್ಕಿಂಗ್ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಬಸ್ ತಂಗುದಾಣ, ಉದ್ಯಾನ, ಪೆಟ್ರೋಲ್ ಬಂಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳ ವಿಳಾಸ ನೀಡುತ್ತಿದ್ದ ಆರೋಪಿಗಳು, ಅದೇ ಸ್ಥಳಕ್ಕೆ ಬಂದು ಮೊಬೈಲ್ ಪಡೆಯುತ್ತಿದ್ದರು. ಡೆಲಿವರಿ ಬಾಯ್‌ನನ್ನು ವಂಚಿಸಿ ಪರಾರಿಯಾಗುತ್ತಿದ್ದರು’ ಎಂದರು.
ಮನೆಯಲ್ಲೇ ಬಾಕ್ಸ್ ತಯಾರಿ: ‘ಆರೋಪಿಗಳು ಬಾಕ್ಸ್‌ನಲ್ಲಿ ಕಲ್ಲು ಇಟ್ಟು ಮನೆಯಲ್ಲಿ ಪ್ಯಾಕಿಂಗ್ ಮಾಡುತ್ತಿದ್ದರು. ಡೆಲಿವರಿ ಬಾಯ್‌ಗಳಿಗೆ ಅನುಮಾನ ಬರಬಾರದೆಂದು ಬಾಕ್ಸ್ ಮೇಲ್ಭಾಗದಲ್ಲಿ ಆಯಾ ಜಾಲತಾಣಗಳ ಹೊದಿಕೆ ಹಾಕುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.
‘ಮೊಬೈಲ್ ವಿತರಿಸಲು ಬರುತ್ತಿದ್ದ ಡೆಲಿವರಿ ಬಾಯ್ ಕಡೆಯಿಂದ ಅಸಲಿ ಬಾಕ್ಸ್ ಪಡೆಯುತ್ತಿದ್ದ ಆರೋಪಿಗಳು, ನಿಗದಿತ ಬೆಲೆಗಿಂತ ಕಡಿಮೆ ಹಣವನ್ನು ಚಿಲ್ಲರೆಯಾಗಿ ಕೊಟ್ಟು ಎಣಿಸಲು ಹೇಳುತ್ತಿದ್ದರು. ಅದೇ ವೇಳೆ ಬಾಕ್ಸ್ ಬದಲಾಯಿಸುತ್ತಿದ್ದರು. ಹಣ ಕಡಿಮೆ ಇರುವುದಾಗಿ ಹೇಳುತ್ತಿದ್ದ ಡೆಲಿವರಿ ಬಾಯ್, ಬಾಕ್ಸ್ ಪಡೆದುಕೊಂಡು ವಾಪಸ್ ಹೋಗುತ್ತಿದ್ದರು. ಕಚೇರಿ ತಲುಪಿದ ಬಳಿಕವೇ ಅವರಿಗೆ ವಂಚನೆ ಬಗ್ಗೆ ಗೊತ್ತಾಗುತ್ತಿತ್ತು’ ಎಂದು ಹೇಳಿದರು.
‘ಫ್ಲಿಪ್‌ಕಾರ್ಟ್’ ಡೆಲಿವರಿ ಬಾಯ್‌ನಿಂದ ದೂರು: ಆರೋಪಿಗಳ ಕೃತ್ಯದ ಬಗ್ಗೆ ‘ಫ್ಲಿಪ್‌ಕಾರ್ಟ್’ ಜಾಲತಾಣದ ಡೆಲಿವರಿ ಬಾಯ್ ಬಸವರೆಡ್ಡಿ ಎಂಬುವರು ಇತ್ತೀಚೆಗೆ ಕೆಂಗೇರಿ ಠಾಣೆಗೆ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡ ಪೊಲೀಸರ ಬಲೆಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
‘ರಾಜರಾಜೇಶ್ವರಿನಗರದ ನಿವಾಸಿ ರಾಹುಲ್ ಎಂಬ ಹೆಸರಿನಲ್ಲಿ ಆರೋಪಿಗಳು, ₹ 48,999 ಮೌಲ್ಯದ ಆ್ಯಪಲ್ ಮೊಬೈಲ್ ಕಾಯ್ದಿರಿಸಿದ್ದರು. ಮೇ 27ರಂದು ಬಸವರೆಡ್ಡಿ ಮೊಬೈಲ್ ಕೊಡಲು ಹೋದಾಗಲೇ ಅವರ ಗಮನ ಬೇರೆಡೆ ಸೆಳೆದು ಕಲ್ಲು ಇದ್ದ ಬಾಕ್ಸ್ ಕೊಟ್ಟು ಕಳುಹಿಸಿದ್ದರು. ಕಚೇರಿಗೆ ಬಂದಾಗ, ಬಾಕ್ಸ್‌ನ ಮೇಲ್ಭಾಗದಲ್ಲಿ ಕತ್ತರಿಸಿದ ಗುರುತು ಇತ್ತು. ಅನುಮಾನಗೊಂಡ ಸಿಬ್ಬಂದಿ, ತೆರೆದು ನೋಡಿದಾಗ ಕಲ್ಲು ಇರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.